ದಲಿತರು, ಆದಿವಾಸಿಗಳಿಗೆ ನಿವೇಶನ ಒದಗಿಸಿ

12 vpt1 CPI(M) Protest
ದಲಿತರು ಮತ್ತು ಆದಿವಾಸಿಗಳಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಸಿಪಿಐಎಂ ವತಿಯಿಂದ ಕಾರ್ಮಾಡು ಗ್ರಾಮ ಪಂಚಾಯಿತಿ ಎದುರು ಶುಕ್ರವಾರ ಪ್ರತಿಭಟನೆ ನಡೆಯಿತು. ಇಬ್ರಾಹಿಂ, ಬಿ.ಕೆ.ಮಾಂಕು. ರಾಚಪ್ಪಾಜಿ, ಪಾಪಣ್ಣ, ಹೊನ್ನಪ್ಪ, ಕುಮಾರ, ಮನೋಜ್, ಎಚ್.ಬಿ.ರಮೇಶ್ ಇದ್ದರು.
Published on


ಕಾರ್ಮಾಡು ಗ್ರಾಮ ಪಂಚಾಯಿತಿ ಎದುರು ಸಿಪಿಐಎಂ ಪ್ರತಿಭಟನೆ


ವಿರಾಜಪೇಟೆ: ಅಮ್ಮತ್ತಿ ಕಾರ್ಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಲಿತರು ಮತ್ತು ಆದಿವಾಸಿಗಳಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಸಿಪಿಐಎಂ ವತಿಯಿಂದ ಕಾರ್ಮಾಡು ಗ್ರಾಮ ಪಂಚಾಯಿತಿ ಎದುರು ಶುಕ್ರವಾರ ಪ್ರತಿಭಟನೆ ನಡೆಯಿತು.

ಸ್ವಂತ ಸೂರು ಇಲ್ಲದೆ ದಲಿತರು ಮತ್ತು ಆದಿವಾಸಿಗಳು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದು, ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತ ಬಡವರಿಗೆ ನಿವೇಶನ ನೀಡಬೇಕೆಂಬ ಮನವಿ ಪತ್ರವನ್ನು ಉಪ ತಹಸೀಲ್ದಾರ್‌ಗೆ ಪ್ರತಿಭಟನಾಕಾರರು ಸಲ್ಲಿಸಿದರು.

ಸಿಪಿಐಎಂ ಅಮ್ಮತ್ತಿ ಶಾಖೆಯ ಕಾರ್ಯದರ್ಶಿ ಎ.ಮಹದೇವ ಮಾತನಾಡಿ, ಹಲವು ವರ್ಷಗಳಿಂದ ನಿವೇಶನಕ್ಕಾಗಿ ದಲಿತರು ಮತ್ತು ಆದಿವಾಸಿಗಳು ಕಾರ್ಮಾಡು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸುತ್ತಿದ್ದರೂ, ಈವರೆಗೂ ನಿವೇಶನ ರಹಿತರಿಗೆ ಸರ್ಕಾರ ನಿವೇಶನ ಒದಗಿಸುವ ಕೆಲಸ ಮಾಡಿಲ್ಲ. ಜತೆಗೆ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪೈಸಾರಿ ಜಾಗವನ್ನು ಗುರುತಿಸಲು ಮುಂದಾಗಿಲ್ಲ ಎಂದು ಕಿಡಿಕಾರಿದರು.

ನಿವೇಶನ ರಹಿತರಿಗೆ ಪಂಚಾಯಿತಿ ನಿವೇಶನ ನೀಡುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ. ಅಗತ್ಯವಿದ್ದಲ್ಲಿ ಕಾನೂನಿನ ಹೋರಾಟ ನಡೆಸುವುದಾಗಿ ಹೇಳಿದರು.

ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷೆ ಜಯಮ್ಮ ಮಾತನಾಡಿ, 70 ವರ್ಷಗಳಿಂದ ಅಮ್ಮತ್ತಿ ಪಟ್ಟಣದ ಬಸ್ ತಂಗುದಾಣದ ಬಳಿ ಇದ್ದ ಶೌಚಗೃಹವನ್ನು ಇತ್ತೀಚೆಗೆ ಒಡೆದುಹಾಕಿ ಅದೇ ಜಾಗದಲ್ಲಿ ಪಂಚಾಯಿತಿ ಅಂಗಡಿ ಮಳಿಗೆಗಳನ್ನು ನಿರ್ಮಿಸಿದೆ. ಪಟ್ಟಣಕ್ಕೆ ಬರುವ ಮಹಿಳೆಯರಿಗೆ ಶೌಚಗೃಹ ಇಲ್ಲದೆ ಸಮಸ್ಯೆ ಉಂಟಾಗಿದ್ದು. ಕೂಡಲೇ ಪಂಚಾಯಿತಿ ಅದೇ ಜಾಗದಲ್ಲಿ ಶೌಚಗೃಹ ನಿರ್ಮಿಸಬೇಕು. ಇಲ್ಲವಾದಲ್ಲಿ ನಿರಂತರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ್ದ ಕಾರ್ಮಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಬಿ.ನಾಣಯ್ಯ, ಹಾಗೂ ತಾಲೂಕು ಕಚೇರಿ ಶಿರಸ್ತೇದಾರ್ ಪೊನ್ನು ಅವರಿಗೆ ಪ್ರತಿಭಟನಕಾರರು ಮನವಿ ಸಲ್ಲಿಸಿದರು. ಈ ವೇಳೆ ಅಮ್ಮತ್ತಿ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್ ಮಾತನಾಡಿ, ಪೈಸಾರಿ ಜಾಗ ಎರಡು ಕಡೆ ಇದ್ದು ಅದನ್ನು ಸರ್ವೇ ಮಾಡಿ ನಂತರ ಸರ್ಕಾರದ ಆದೇಶದಂತೆ ನಿವೇಶನ ರಹಿತರಿಗೆ ನೀಡಲಾಗುವುದು. ಅದಕ್ಕೂ ಮೊದಲು ಫಲನುಬಾವಿಗಳು ನಿರಾಶ್ರಿತರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕು ಎಂದರು.

ಆರಂಭದಲ್ಲಿ ರಾಮಮಂದಿರದಿಂದ ಪ್ರತಿಭಟನೆ ಮೆರವಣಿಗೆ ಹೊರಟು ಅಮ್ಮತ್ತಿ ಮುಖ್ಯರಸ್ತೆ ಮೂಲಕ ಸಾಗಿ ಕಾರ್ಮಾಡು ಪಂಚಾಯಿತಿ ಎದುರು ಅಂತ್ಯವಾಯಿತು. ಸಿಪಿಐಎಂ ಸದಸ್ಯರಾದ ಇಬ್ರಾಹಿಂ, ಬಿ.ಕೆ.ಮಾಂಕು. ರಾಚಪ್ಪಾಜಿ, ಪಾಪಣ್ಣ, ಹೊನ್ನಪ್ಪ, ಕುಮಾರ, ಮನೋಜ್, ಎಚ್.ಬಿ.ರಮೇಶ್ ಉಪಸ್ಥಿತರಿದ್ದರು. ಮಹಿಳಾ ಸದಸ್ಯರು ಹೆಚ್ಚು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net