ದಲಿತರು, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಕ್ಕೆ ಖಂಡನೆ

29 yelandur 06 (1)
ಯಳಂದೂರು ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗ ವಿವಿಧ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು.
Published on

ಯಳಂದೂರು: ಬುಡಕಟ್ಟು ಜನರು, ದಲಿತರು, ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಾಜ್ಯ ದಲಿತ ಮಹಿಳಾ ಒಕ್ಕೂಟ, ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಸೇರಿದಂತೆ ವಿವಿಧ ಪ್ರಗತಿ ಪರ ಸಂಘಟನೆಗಳ ಸದಸ್ಯರು ಮಂಗಳವಾರ ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಮಣಿಪುರದ ಕಾಂಗ್‌ಪೋಕ್ವಿ ಜಿಲ್ಲೆಯ ಗ್ರಾಮವೊಂದರಲ್ಲಿ ಬುಡಕಟ್ಟು ಜನಾಂಗದ ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು. ಇದು ತಲೆತಗ್ಗಿಸುವ ವಿಚಾರ. ಕೂಕಿ ಬುಡಕಟ್ಟು ಜನಾಂಗದ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಯುತ್ತಿದೆ. ಅಂದಾಜು 5856 ಕ್ಕೂ ಹೆಚ್ಚು ಅತ್ಯಾಚಾರ ದೂರುಗಳು ದಾಖಲಾಗಿವೆ. 300 ಕ್ಕೂ ಹೆಚ್ಚು ಕ್ರೈಸ್ತ ದೇವಾಲಯಗಳಿಗೆ ಬೆಂಕಿ ಹಚ್ಚಲಾಗಿದ್ದು, 150 ಕ್ಕೂ ಹೆಚ್ಚು ಸಾವುಗಳು ಸಂಭವಿವೆ. ಕೂಕಿ ಕ್ರೈಸ್ತ ಸಮುದಾಯವನ್ನು ನಾಶ ಮಾಡುವ ಹುನ್ನಾರ ನಡೆದಿರುವುದು ಮೇಲ್ನೂಟಕ್ಕೆ ಕಂಡು ಬಂದಿದ್ದು, ತಪ್ಪಿಸತ್ಥರಿಗೆ ಶಿಕ್ಷಯಾಗಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.

ಧರ್ಮಸ್ಥಳದಲ್ಲಿ ನಡೆದಿರುವ ಸೌಜನ್ಯಾ ಕೊಲೆ ಪ್ರಕರಣವನ್ನು ಎಸ್‌ಎಟಿ ತನಿಖಾ ಸಂಸ್ಥೆಗೆ ನೀಡಬೇಕು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಮಾಜಿ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಪ್ರಕರಣ ದಾಖಲಿಸಬೇಕು. ನಟ ಉಪೇಂದ್ರ ಅವರ ಹೊಲಗೇರಿ ಪದ ಬಳಕೆ ಅನಾಗರಿಕ ನಡವಳಿಕೆಯಾಗಿದೆ. ಈ ನಟ ರಾಜಕೀಯ ಪಕ್ಷ ಕಟ್ಟಿ ಬೆಳೆಸುತ್ತೇನೆಂದು ಹೊರಡಿರುವುದು ಹಾಸ್ಯಾಸ್ಪದವಾಗಿದ್ದು, ಈತನ ವಿರುದ್ಧವೂ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ದಲಿತರ ವಿರುದ್ಧ ಅವಹೇಳಕನ ಪದ ಬಳಕೆ ಮಾಡಿದ್ದು, ಇವರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾ ಮಾಡಿ ದೂರು ದಾಖಲಿಸಬೇಕು ಎಂದರು.

ಕ್ರಾಂತಿಗೀತೆಗಳನ್ನು ಹಾಡಿದ ನಂತರ ರಾಷ್ಟ್ರಪತಿ, ಮುಖ್ಯಮಂತ್ರಿಗಳಿಗೆ ತಹಸೀಲ್ದಾರ್ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು.

ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಕಂದಹಳ್ಳಿ ನಾರಾಯಣ, ತಾಲೂಕು ಸಂಚಾಲಕ ಎಚ್.ಎಂ.ಶಂಕರಮೂರ್ತಿ, ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷ ಮಾದೇಶ್, ತಾಲೂಕು ಅಧ್ಯಕ್ಷ ಹೊನ್ನೂರು ಸುರೇಶ್, ಡಾ.ಲೋಕೇಶ್ ಭರಣಿ, ಕಂದಹಳ್ಳಿ ಸೋಮಣ್ಣ, ನಳಿನಾಕುಮಾರಿ, ಎನ್.ಭಾಗ್ಯಲಕ್ಷ್ಮೀ, ರಾಜಮ್ಮ, ಶಂಕರ್‌ನಾಗ್, ಮಲ್ಲರಾಜು, ಚಂದ್ರಶೇಖರ್, ಟೈಗರ್‌ಮಹೇಶ್, ಬಳೇಪೇಟೆ ಶಾಂತರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net