ದಲಿತರಿಗೆ ನ್ಯಾಯ ಕೊಡಿಸಲು ಹೋರಾಟ

TKE (DSS)
ತರೀಕೆರೆಯಲ್ಲಿ ಡಿಎಸ್‌ಎಸ್ ಕಾರ್ಯಕರ್ತರ ಸಭೆ ನಡೆಯಿತು. ವಸಂತ್‌ಕುಮಾರ್, ಶಂಕರನಾರಾಯಣ, ಶಿವಲಿಂಗಪ್ಪ, ಜಯಸ್ವಾಮಿ ಇತರರಿದ್ದರು.
Published on

ತರೀಕೆರೆ: ದಲಿತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ರೂಪಿಸಲಾಗುವುದು ಎಂದು ತಾಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕ ವಸಂತ್‌ಕುಮಾರ್ ಹೇಳಿದರು.

ತಾಲೂಕು ದಲಿತ ಸಂಘರ್ಷ ಸಮಿತಿಯಿಂದ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ತಾಲೂಕಿನ ವಿವಿಧೆಡೆ ನೆಲೆಸಿರುವ ದಲಿತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಹಂತ ಹಂತವಾಗಿ ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಪಟ್ಟಣದ ಸುಂದರೇಶ್ ಬಡಾವಣೆಯ ಸ.ನಂ 26ರಲ್ಲಿ 2.20 ಎಕರೆ ಖಾಲಿ ಜಾಗವಿದ್ದು, ಪ್ರಭಾವಿಗಳಿಂದ ಒತ್ತುವರಿ ಮಾಡುವ ಹುನ್ನಾರ ನಡೆದಿದೆ. ಅಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ನಿವೇಶನ ಮೀಸಲಿಡಲು ತಾಲೂಕು ಆಡಳಿತವನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಮುಖಂಡ ಶಂಕರನಾರಾಯಣ ಮಾತನಾಡಿ, ತಾಲೂಕಿನ ಬಹುತೇಕ ಕಡೆ ದಲಿತರ ಕೃಷಿಭೂಮಿ ಅತಿಕ್ರಮಣವಾಗಿದೆ. ಸರ್ಕಾರಿ ಶಾಲೆಗಳಲ್ಲೂ ಸಾಕಷ್ಟು ಸಮಸ್ಯೆ ಇದೆ. ಇಂಥ ಸಮಸ್ಯೆ ಇತ್ಯರ್ಥಕ್ಕೆ ಸಾಮೂಹಿಕ ಹೋರಾಟ ಕೈಗೊಳ್ಳಲಾಗುವುದು ಎಂದರು.

ರಾಷ್ಟ್ರೀಯ ಮಾನವ ಹಕ್ಕುಗಳ ಮಾಹಿತಿ ಸಮಿತಿ ರಾಜ್ಯ ಉಪಾಧ್ಯಕ್ಷ ಜಯಸ್ವಾಮಿ ಮಾತನಾಡಿ, ಬದ್ಧತೆ ಜತೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಸಂಘಟನೆಗಳ ಹೋರಾಟಕ್ಕೆ ಬೆಂಬಲ ನೀಡಲಾಗುವುದಲ್ಲದೆ, ಶೋಷಿತರ ಸಮಸ್ಯೆಗೆ ಪೂರಕವಾಗಿ ಸ್ಪಂದಿಸಲಾಗುವುದು ಎಂದು ಹೇಳಿದರು.

ತಾಲೂಕು ದಲಿತ ಸಂಘರ್ಷ ಸಮಿತಿ ಸಂಘಟನಾ ಸಂಚಾಲಕರಾದ ಮಂಜುನಾಥ್, ರಮೇಶ್, ಆನಂದ್, ಖಜಾಂಚಿ ತಿಮ್ಮಣ್ಣ, ಮಾಜಿ ಸಂಚಾಲಕ ಶಿವಲಿಂಗಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net