

ಹಾಸನ: ತಾಲೂಕಿನ ಸಾಲಗಾಮೆ ಹೋಬಳಿ ಕಾಮೇನಹಳ್ಳಿಯ ಸ.ನಂ. 125 ರಿಂದ 128 ರ ವರೆಗಿನ ಜಮೀನಿನಲ್ಲಿ ಪರಿಶಿಷ್ಟ ಜಾತಿ ಭೋವಿ ಜನಾಂಗಕ್ಕೆ ಸೇರಿದ ಹತ್ತಾರು ಬಡ ಕುಟುಂಬಗಳು ಕಲೆದ 65 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದು, ಇದೀಗ ಅವರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಯುತ್ತಿದೆ ಎಂದು ಬಡ ಕುಟುಂಬ ಸದಸ್ಯರು ಆರೋಪಿಸಿದರು.
ನಾವು ತಿಮ್ಮನಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದು, ಒಟ್ಟು 180 ಕುಟುಂಬಗಳ ಪೈಕಿ 150 ಕುಟುಂಬದವರು ಎಲ್‌ಆರ್‌ಎಫ್ ಆದೇಶದ ಮೇರೆಗೆ ಮಂಜೂರು ಮಾಡಿಕೊಂಡಿದ್ದಾರೆ. ಉಳಿದ 35 ಕುಟುಂಬದವರು ಮಂಜೂರಾಗದೆ ಎಲ್‌ಆರ್‌ಎಫ್ ಅರ್ಜಿ ನೀಡಿ ಸುಮಾರು 15.35 ಎಕರೆ ಜಮೀನಿನಲ್ಲಿ ಸ್ವಾಧೀನದಲ್ಲಿದ್ದಾರೆ.ನಮ್ಮ ತಂದೆ, ಹಿರಿಯರ ಕಾಲದಿಂದಲೂ ಗೇಣಿದಾರರಾಗಿ ನಾವು ಉಳುಮೆ ಮಾಡಿಕೊಂಡು ಬರುತ್ತಿದ್ದೇವೆ. ಆದರೆ ಜಮೀನು ನಮ್ಮ ಹೆಸರಿನಲ್ಲಿ ಇಲ್ಲ. ಇದೀಗ ಬೇಲೂರು ತಾಲೂಕು ಹುಲುಗುಂಡಿ ಗ್ರಾಮದ ಮೂಲ ಪುರುಷ ಕೆ.ಶ್ರೀನಿವಾಸ್ ಅಯ್ಯಂಗಾರ್ ಹಾಗೂ ಇವರ ಪತ್ನಿ ರಂಗನಾಯಕಮ್ಮ ಮತ್ತು ಹೆಚ್.ಟಿ.ಗೋವಿಂದರಾಜು ಅಯ್ಯಂಗಾರ್ ಇವರು, ಜಮೀನು ತಮ್ಮ ಹಕ್ಕು ಸ್ವಾಧೀನದಲ್ಲಿದೆ ಎಂದು ತಮ್ಮ ಹೆಸರಿನ ಖಾತೆ ಮಾಡಿಕೊಂಡು ನಮಗೆ ತೊಂದರೆ ನೀಡುವ ಮೂಲಕ ಬೇರೆಯವರಿಗೆ ಮಾರಾಟ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅಳಲು ತೋಡಿಕೊಂಡರು.
ಈಗ ಹಕ್ಕು ವರ್ಗಾವಣೆ ಮಾಡಿಕೊಂಡಿರುವವರು ಕಳೆದ 70 ವರ್ಷಗಳಿಂದ ಸ್ವಾಧೀನದಲ್ಲಿ ಇರಲಿಲ್ಲ. ಆದರೂ ಅಮಾಯಕರು, ನಿರ್ಗತಿಕರಾದ ನಮ್ಮಗಳ ಹಕ್ಕು ಸ್ವಾಧೀನದಲ್ಲಿರುವ 15.35 ಎಕರೆ ಜಮೀನನ್ನು ಅಕ್ರಮವಾಗಿ ಹಕ್ಕು ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ದೂರಿದರು.
ಹಲವು ದಶಕಗಳಿಂದ ನಾವು ಅನುಭವದಲ್ಲಿರುವ ಜಮೀನನ್ನು ನಮಗೇ ಉಳಿಸಿಕೊಡುವಂತೆ ಬಡಪಾಯಿಗಳು ಮನವಿ ಮಾಡಿದರು. ಜಿಲ್ಲಾಡಳಿತ ಕೂಡಲೇ ಮಧ್ಯೆ ಪ್ರವೇಶ ಮಾಡಬೇಕು. ಇಲ್ಲದಿದ್ದರೆ ಮೊದಲೇ ನಮಗೆ ಬೇರೆ ಭೂಮಿ ಇಲ್ಲ, ಅಕಸ್ಮಾತ್ ನಾವು ಸತ್ತರೆ ಹೂಳಲು ಯಾವುದೇ ಜಾಗ ಇಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಯುವ ಮುಖಂಡ ರವೀಶ್, ಗ್ರಾಮಸ್ಥರಾದ ದೇವರಾಜ್, ರಾಜು, ವೆಂಕಟೇಶ್, ಅಯ್ಯಣ್ಣ, ವೆಂಕಟೇಶ್ ಇತರರು ಇದ್ದರು.