

ಅಥಣಿ ಗ್ರಾಮೀಣ: ದಲಿತರಿಗೆ ಗ್ರಾಮ ಪಂಚಾಯಿತಿ ಹಾಗೂ ತಾಪಂ ಮಟ್ಟದಲ್ಲಿ ಯಾವುದೇ ಸಮಸ್ಯೆಗಳಿದ್ದಲ್ಲಿ ಕೂಡಲೇ ಪೊಲೀಸ್ ಠಾಣೆ ಸಂಪರ್ಕಿಸಿದರೆ ನ್ಯಾಯ ದೊರಕಿಸಿಕೊಡುತ್ತೇವೆ ಎಂದು ಅಥಣಿ ಡಿವೈಎಸ್ಪಿ ಪ್ರಶಾಂತ ಮುನ್ನೋಳಿ ಹೇಳಿದರು.
ಸಮೀಪದ ಅನಂತಪುರ ಗ್ರಾಮದಲ್ಲಿ ಎಸ್ಸಿ, ಎಸ್ಟಿ ಸಮುದಾಯದವರ ಸಮಸ್ಯೆಗಳ ಕುರಿತು ಈಚೆಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ಪ್ರತಿ ತಿಂಗಳು ೨ನೇ ಭಾನುವಾರ ಗ್ರಾಮೀಣ ಪ್ರದೇಶದಲ್ಲಿ ಬೀಟ್ ಪೊಲೀಸರು ಸಭೆ ನಡೆಸುತ್ತಾರೆ. ಅಲ್ಲಿ ನಿಮ್ಮ ಸಮಸ್ಯೆಗಳನ್ನು ಗಮನಕ್ಕೆ ತಂದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಸಿಪಿಐ ಸಂತೋಷ ಹಾಳೂರು, ಪಿಎಸ್‌ಐ ಮಲ್ಲಿಕಾರ್ಜುನ ಉಪ್ಪಾರ, ದಲಿತ ಹೋರಾಟ ಸಮಿತಿ ತಾಲೂಕಾಧ್ಯಕ್ಷ ರವಿ ಕಾಂಬಳೆ, ಪಂಡಿತ ಕಾಂಬಳೆ, ಧನವಂತ ಕಾಂಬಳೆ ಇತರರಿದ್ದರು.