ದಲಿತರ ಮೇಲೆ ದೌರ್ಜನ್ಯ ನಡೆದರೆ ಕಠಿಣ ಕ್ರಮ: ಎಸ್ಪಿ ಹರಿರಾಮ್ ಶಂಕರ್

ದಲಿತರ ಮೇಲೆ ದೌರ್ಜನ್ಯ ನಡೆದರೆ ಕಠಿಣ ಕ್ರಮ: ಎಸ್ಪಿ ಹರಿರಾಮ್ ಶಂಕರ್
Published on


ಹಾಸನ: ಜಿಲ್ಲ್ಲೆಯಾದ್ಯಂತ ನಡೆಯುತ್ತಿರುವ ದಲಿತರ ಮೇಲಿನ ಹಲ್ಲೆ ಹಾಗೂ ದೌರ್ಜನ್ಯ ಪ್ರಕರಣಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಸ್ಪಿ ಹರಿರಾಮ್ ಶಂಕರ್ ಎಚ್ಚರಿಸಿದರು.

ಕಳೆದ ಒಂದು ವರ್ಷಗಳಿಂದ ಕೊವಿಡ್ ಹಾಗೂ ಇನ್ನಿತರ ಕಾರಣಗಳಿಂದ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಕುಂದು ಕೊರತೆ ಸಭೆ ನಡೆಸಲು ಸಾಧ್ಯವಾಗಿರಲಿಲ್ಲ. ಅ.2 ರಂದು ಸಭೆ ನಡೆಸಲಾಗಿದ್ದು, ದಲಿತರ ಮೇಲಿನ ದೌರ್ಜನ್ಯ ಸೇರಿದಂತೆ ಅನೇಕ ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗಿದೆ ಎಂದರು.

ಸಭೆಯಲ್ಲಿ ಸುಮಾರು 300 ಕ್ಕೂ ಹೆಚ್ಚು ದಲಿತ ಮುಖಂಡರು ಭಾಗವಹಿಸಿ ವಿವಿಧ ಸಮಸ್ಯೆಗಳ ಕುರಿತು ತಿಳಿಸಿದ್ದಾರೆ. ಜಮೀನು ವ್ಯಾಜ್ಯ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಮುಂದಿನ ದಿನಗಳಲ್ಲಿ ಜಮೀನು ವಿಚಾರವಾಗಿ ಗಲಾಟೆ ನಡೆದರೆ ಕಂದಾಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಕೌಂಟರ್ ಕೇಸು ದಾಖಲಿಸುತ್ತಿರುವ ದೂರುಗಳು ಕೇಳಿ ಬಂದಿವೆ. ಅಂತಹ ಸಂದರ್ಭದಲ್ಲಿ ಸುಳ್ಳು ಕೇಸು ದಾಖಲಿಸಿರುವುದು ದೃಢಪಟ್ಟರೆ ಅಂತಹವರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.


ಇತ್ತೀಚೆಗೆ ದುದ್ದ ಗ್ರಾಮದಲ್ಲಿ ದಲಿತರಿಗೆ ದೇವಾಲಯ ಪ್ರವೇಶ ನಿರಾಕರಣೆ ಮಾಡಲಾಗಿತ್ತು. ಪೊಲೀಸರ ಸಮ್ಮುಖದಲ್ಲಿ ದಲಿತರಿಗೆ ದೇವಾಲಯ ಪ್ರವೇಶ ಕಲ್ಪಿಸಲಾಗಿದೆ. ವಿರೋಧಿಸಿದವರಿಗೆ ಕಾನೂನು ಕ್ರಮಗಳ ಬಗ್ಗೆ ಎಚ್ಚರಿಕೆ ನೀಡಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net