

ಬೇಲೂರು: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಿತ ರಕ್ಷಣೆಗಾಗಿ ದಲಿತ ಮುಖಂಡರ ಸಭೆಯನ್ನು ಇನ್ಸ್‌ಪೆಕ್ಟರ್ ರವಿಕಿರಣ್ ನೇತೃತ್ವದಲ್ಲಿ ಬೇಲೂರು ಪೊಲೀಸ್ ಠಾಣೆಯಲ್ಲಿ ಭಾನುವಾರ ನಡೆಸಲಾಯಿತು.
ಇನ್ಸ್‌ಪೆಕ್ಟರ್ ರವಿಕಿರಣ್ ಮಾತನಾಡಿ, ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿನಾಕಾರಣ ದಲಿತರ ಮೇಲಿನ ದೌರ್ಜನ್ಯಗಳು ಕಂಡು ಬಂದರೆ ತಕ್ಷಣ ತಿಳಿಸಬೇಕು. ಯಾವುದೇ ಅಹಿತಕರ ಘಟನೆಗಳಿಗೂ ಅವಕಾಶವಾಗದಂತೆ ಪೊಲೀಸರು ಮುನ್ನೆಚ್ಚರಿಕೆ ಕೈಗೊಳ್ಳುತ್ತಾರೆ. ಬೀಟ್ ಪೊಲೀಸರು ಗ್ರಾಮಗಳಿಗೆ ಭೇಟಿ ನೀಡಿ ಕುಂದು ಕೊರತೆಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಇದರ ಜತೆಗೆ ಗ್ರಾಮಗಳಲ್ಲಿ ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮನೆಗಳ್ಳತನ, ಅಂಗಡಿ ಮುಂಗಟ್ಟುಗಳ ಕಳ್ಳತನ, ಮೊಬೈಲ್, ಬೈಕ್ ಕಳವು ಸೇರಿದಂತೆ ಇನ್ನಿತರ ಘಟನೆಗಳು ಸಂಭವಿಸಿದರೆ ತಕ್ಷಣ ಪೊಲೀಸರ ಗಮನಕ್ಕೆ ತಂದರೆ ಬೇಗ ಪತ್ತೆಗೆ ಅನುಕೂಲವಾಗುತ್ತದೆ. ಬೆಳಗಿನ ಜಾವ ವಾಕ್ ಹೋಗುವ ಮಹಿಳೆಯರು ತಮ್ಮ ಒಡವೆಗಳ ಮೇಲೆ ನಿಗಾವಹಿಸಬೇಕು. ವಾಹನ ಸವಾರರು ವಾಹನದ ದಾಖಲಾತಿ, ವಿಮೆ, ಲೈಸೆನ್ಸ್, ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದರು.
ದಲಿತ ಮುಖಂಡ ಪರ್ವತಯ್ಯ ಮಾತನಾಡಿ, ತಾಲೂಕಿನಲ್ಲಿ ಎಸ್ಸಿ-ಎಸ್ಟಿ ಜನಸಂಖ್ಯೆ ಹೆಚ್ಚಿದ್ದು, ದಲಿತರು ಯಾವುದೇ ಸಮಸ್ಯೆ ಹೊತ್ತು ಠಾಣೆಗೆ ಬಂದರೆ ಪೊಲೀಸ್ ಸಿಬ್ಬಂದಿ ಅರ್ಜಿದಾರರನ್ನು ಗೌರವದಿಂದ ಕಾಣಬೇಕು. ಜತೆಗೆ ನಗರದಲ್ಲಿ ಟಿಪ್ಪರ್‌ಗಳು ವೇಗವಾಗಿ ಚಲಿಸುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಅಲ್ಲದೆ ಅಬಕಾರಿ ಅಧಿಕಾರಿಗಳ ನಿರ್ಲಕ್ಷೃದಿಂದ ತಾಲೂಕಿನಾದ್ಯಂತ ಕೆಲ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿದೆ. ಇದರಿಂದಾಗಿಯೇ ಹೆಚ್ಚು ಗಲಾಟೆ, ಘರ್ಷಣೆಗಳು ನಡೆಯಲು ಕಾರಣವಾಗುತ್ತಿದೆ. ಇದನ್ನು ಪೊಲೀಸರು ತಡೆಗಟ್ಟಬೇಕಿದೆ. ಬಾರ್‌ಗಳು ಬೆಳಿಗ್ಗೆ 6 ಗಂಟೆಗೆ ಬಾಗಿಲು ತೆರೆದು ಮದ್ಯ ಮಾರಾಟ ಪ್ರಾರಂಭಿಸಿದ್ದಾರೆ. ದಯವಿಟ್ಟು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಇದನ್ನು ತಡೆಗಟ್ಟಲು ಮುಂದಾಗಬೇಕು ಎಂದರು.
ತಾಪಂ ಮಾಜಿ ಸದಸ್ಯ ಮಂಜುನಾಥ್, ಮುಖಂಡರಾದ ಎಂ.ಜಿ.ವೆಂಕಟೇಶ್, ತೀರ್ಥ ಕುಮಾರ್, ಲಕ್ಷ್ಮೀನಾರಾಯಣ್, ದಸಂಸ (ಅಂಬೇಡ್ಕರ್ ವಾದ) ಸಂಚಾಲಕ ಧರ್ಮಯ್ಯ, ಎಎಸ್‌ಐ ವಿರುಪಾಕ್ಷ, ನಾಗೇಶ್, ಸಿಬ್ಬಂದಿ ದೇವರಾಜ್, ಚೇತನ್, ಪ್ರವೀಣ್, ಉಮೇಶ್ ಮತ್ತಿತರರಿದ್ದರು.