

ಗಂಗಾವತಿ: ದೌರ್ಜನ್ಯಕ್ಕೊಳಗಾದ ತಾಲೂಕಿನ ಮರಕುಂಬಿಯ ದಲಿತ ಕುಟುಂಬಗಳ ಮಕ್ಕಳಿಗೆ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಸಿಪಿಐ(ಎಂ) ತಾಲೂಕು ಸಮಿತಿ ಸದಸ್ಯರು ನಗರದ ಸಮಾಜ ಕಲ್ಯಾಣ ಇಲಾಖೆ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.
ಸಮಿತಿ ಜಿಲ್ಲಾ ಕಾರ್ಯದರ್ಶಿ ನಿರುಪಾದಿ ಬೆಣಕಲ್ ಮಾತನಾಡಿ, ತಾಲೂಕಿನಲ್ಲಿ ದೌರ್ಜನ್ಯ ಪ್ರಕರಣ ಹೆಚ್ಚುತ್ತಿದ್ದು, ತಾಲೂಕಿನ ಮರಕುಂಬಿಯಲ್ಲಿ 2000 ರಿಂದ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಬಿದ್ದಿಲ್ಲ. 2014ರಲ್ಲಿ ದಲಿತರ ಮನೆಗಳನ್ನು ಸುಟ್ಟು ಹಾಕಲಾಗಿದ್ದು, ಇದುವರೆಗೂ ಪರಿಹಾರ ಸಿಕ್ಕಿಲ್ಲ. ದಲಿತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದ್ದ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯದಿಂದ ದೌರ್ಜನ್ಯ ಪ್ರಕರಣ ನಿಲ್ಲುತ್ತಿಲ್ಲ. ಮನೆ, ನಿವೇಶನ ವಿತರಿಸುವುದು, ಭೂ ಒಡೆತನ ಯೋಜನೆಯಡಿ ಭೂಮಿ ಮಂಜೂರು, ನಿರುದ್ಯೋಗ ಯುವಕ, ಯುವತಿಯರಿಗೆ ಸರ್ಕಾರಿ ನೌಕರಿ ನೀಡುವುದು, ಮಕ್ಕಳಿಗೆ ಮುರಾರ್ಜಿ ದೇಸಾಯಿ ಸೇರಿ ಇತರ ವಸತಿ ಶಾಲೆಯಲ್ಲಿ ಪ್ರವೇಶ, ದಲಿತ ಕೇರಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣ, ದೌರ್ಜನ್ಯ ಪ್ರಕರಣದಲ್ಲಿ ಮನೆ ಕಳೆದುಕೊಂಡ ಕುಟುಂಬಗಳಿಗೆ ಮನೆ ನಿರ್ಮಾಣ ಮತ್ತು ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದರು.
ಪದಾಧಿಕಾರಿಗಳಾದ ಬಸವರಾಜ ಮರಕುಂಬಿ, ಕೆ.ಹುಸೇನಪ್ಪ, ಹುಲುಗಪ್ಪ ಮರಕುಂಬಿ, ಮಂಜುನಾಥ ಡಗ್ಗಿ, ಯು.ನಾಗರಾಜ್, ಸಣ್ಣ ಹುಲುಗಪ್ಪ, ಮೋಹನ್, ಕೀರಮ್ಮ, ಈರಮ್ಮ, ಹುಲಿಗೆಮ್ಮ ಇತರರಿದ್ದರು.