ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟುವಲ್ಲಿ ವಿಫಲ: ಮುಖಂಡರಿಂದ ಪ್ರತಿಭಟನೆ

ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟುವಲ್ಲಿ ವಿಫಲ: ಮುಖಂಡರಿಂದ ಪ್ರತಿಭಟನೆ
Published on

ಹಾಸನ:
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಎಸ್ಸಿ, ಎಸ್ಟಿ ಸಭೆಯಲ್ಲಿ ದಲಿತರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಅಸಮಾಧಾನ ವ್ಯಕ್ತಪಡಿಸಿದ ದಲಿತ ಮುಖಂಡರು ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಪ್ರತಿಭಟನೆ ನಡೆಸಿದರು.
ಸಭೆಯಲ್ಲಿ ಏನಾದರೂ ದೂರುಗಳಿದ್ದರೆ ತಿಳಿಸಬಹುದು ಎಸ್‌ಪಿ ಮೊಹಮ್ಮದ್ ಸುಜಿತಾ ಅವರು ಕೇಳಿದರು. ಆಗ ಸಭೆಯಲ್ಲಿದ್ದ ದಲಿತ ಮುಖಂಡ ಎಚ್.ಕೆ.ಸಂದೇಶ ಅವರು ಸಮಯದಾಯದ ಪರವಾಗಿ ಜಿಲ್ಲೆಯಲ್ಲಿ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯಗಳ ಬಗ್ಗೆ ವಿವರ ನೀಡಿದರು.
ಮಡೆನೂರಿನಲ್ಲಿ ದಲಿತರಿಗೆ ದೇವಾಲಯ ಪ್ರವೇಶಕ್ಕೆ ನಿರ್ಬಂಧದ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತರಲಾಯಿತು. ಆನಂತರ ಜಿಲ್ಲಾಡಳಿತ ಮಾರ್ಚ್ 3 ರಂದು ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಿತು. ಆದರೆ ಘಟನಾ ಸ್ಥಳಕ್ಕೆ ಡಿಸಿ, ಎಸ್ಪಿ, ತಹಸೀಲ್ದಾರ್ ಅವರು ಗೈರಾಗಿರುವ ಬಗ್ಗೆ ಸಭೆಯಲ್ಲಿ ವಿರೋಧ ವ್ಯಕ್ತವಾದವು. ಚನ್ನರಾಯಪಟ್ಟಣ ತಾಲೂಕಿನಲ್ಲಿ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ದಲಿತ ಸಮುದಾಯದವರೊಬ್ಬರ ಬೈಕ್ ಅನ್ನು ಹಗಲಲ್ಲೇ ಸುಟ್ಟು ಹಾಕಿದ್ದಾರೆ. ಕೃತ್ಯ ಎಸಗಿರುವವರ ಮೇಲೆ ಕಾನೂನು ಕ್ರಮಕ್ಕೆ ದೂರು ನೀಡಿದರೂ ಅವರನ್ನು ಬಂಧಿಸಿ ಮತ್ತೆ ಬಿಟ್ಟು ಕಳುಹಿಸಿದ್ದೀರಿ. ಇನ್ನು ಆಲೂರು ತಾಲೂಕಿನಲ್ಲಿ ಕೆರೆಯ ನೀರನ್ನೇ ದಲಿತರು ಮುಟ್ಟುವುದಕ್ಕೆ ನಿರ್ಬಂಧ ಹೇರಿದರೂ ಯಾರ ಮೇಲೂ ಯಾವುದೇ ಕ್ರಮವಾಗಿಲ್ಲ. ಹೀಗೆ ದಲಿತರ ಮೇಲೆ ನಿರಂತರವಾಗಿ ಒಂದಲ್ಲ ಒಂದು ಸಾಮಾಜಿಕ ಸಮಸ್ಯೆಗಳು ತಲೆದೋರುತ್ತಿದ್ದರೂ ಘಟನೆ ನಡೆದ ಸ್ಥಳಕ್ಕೆ ಎಸ್ಪಿಯಾಗಲಿ ಡಿಸಿಯಾಗಲಿ ಭೇಟಿ ನೀಡುವುದಿಲ್ಲ ಎಂದ ಮೇಲೆ ನಮಗೇಕೆ ಬೇಕು ಈ ಸಭೆ ಎಂದು ಸಭೆ ಬಹಿಷ್ಕಾರ ಮಾಡಿ ಹೊರ ನಡೆದರು.
ಬಳಿಕ ದಲಿತ ಮುಖಂಡರು ಎಸ್ಪಿ ಕಚೇರಿ ಮುಂಭಾಗ ಕೆಲ ಸಮಯ ಪ್ರತಿಭಟನೆ ನಡೆಸಿ ನಂತರ ಮೆರವಣಿಗೆ ಮೂಲಕ ಅಂಬೇಡ್ಕರ್ ಪ್ರತಿಮೆ ಮುಂಭಾಗ ಧರಣಿ ನಡೆಸಿ ದಲಿತರ ಮೇಲೆ ಜಿಲ್ಲಾಡಳಿತದ ನಿರ್ಲಕ್ಷೃ ಧೋರಣೆ ಖಂಡಿಸಿ ಧಿಕ್ಕಾರ ಕೂಗಿದರು.
ಪ್ರತಿಭಟನೆಯಲ್ಲಿ ಆರ್‌ಪಿಐ ರಾಜ್ಯಾಧ್ಯಕ್ಷ ಸತೀಶ್, ದಲಿತ ಮುಖಂಡರಾದ ಸೋಮಶೇಖರ್, ವಿಜಯ್ ಕುಮಾರ್, ಅಂಬುಗ ಮಲ್ಲೇಶ, ಪ್ರಸನ್ನ , ಶಿವಮ್ಮ, ಕೋಮಲಾ, ಮಂಜುಳಾ, ಗೌರಮ್ಮ, ರಂಗಯ್ಯ, ರತ್ನಮ್ಮ, ಪ್ರಶಾಂತ್, ಪುಟ್ಟಮ್ಮ, ಅರೇಹಳ್ಳಿ ನಿಂಗರಾಜು, ರಾಜಶೇಖರ್, ಭಾಗ್ಯಾ ಸೇರಿದಂತೆ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net