ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಲಿತರ ಮೀಸಲು ನಿಧಿಯ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇದರ ವಿರುದ್ಧ ಸಮಿತಿ ಹೋರಾಟ ನಡೆಸಲಿದೆ ಎಂದು ‘ಹಣ ದುರ್ಬಳಕೆ ವಿರೋಧಿ ಹೋರಾಟ ಸಮಿತಿ-ಕರ್ನಾಟಕ’ ತಿಳಿಸಿದೆ.
ಇತ್ತೀಚಿಗೆ ಮಂಡಿಸಿರುವ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ದಲಿತರ ಮೀಸಲು ನಿಧಿಗೆ ಕನ್ನ ಹಾಕುವ ಛಾಳಿಯನ್ನು ಸರ್ಕಾರ ಮುಂದುವರಿಸಿದೆ.
ಹೀಗಾಗಿ ಇದರ ವಿರುದ್ಧ ರಾಜ್ಯಾದ್ಯಂತ ಸಮುದಾಯದವರ ಮನೆ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸಿ, ಅನ್ಯಾಯದ ವಿರುದ್ಧ ಎಚ್ಚರಿಸುವ ಹೋರಾಟ ನಡೆಸಲಾಗುವುದು ಎಂದು ಸಮಿತಿಯ ಮುಖಂಡ ಡಾ.ವೆಂಕಟಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಹಿಂದೆ ಬಿಜೆಪಿ, ಜೆಡಿಎಸ್ ಸರ್ಕಾರದ ವೇಳೆಯೂ ಇದು ಆಗಿದ್ದರೂ ಅದನ್ನು ವಿರೋಧಿಸಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರು ಅದೇ ಹಾದಿಯಲ್ಲಿ ಸಾಗಿರುವುದು ಖಂಡನೀಯ ಎಂದು ಕಿಡಿಕಾರಿದರು.
ಎಸ್‌ಸಿ, ಎಸ್‌ಟಿ ಬಿಟ್ಟು ಉಳಿದೆಲ್ಲ ಸಮುದಾಯಗಳಿಗೆ ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸಲು ಸಿದ್ದರಾಮಯ್ಯ ಅವರು 51,034 ಕೋಟಿ ರೂ. ಖಜಾನೆಯಿಂದ ನೀಡಿದ್ದಾರೆ. ಆದರೆ ಪರಿಶಿಷ್ಟ ಜಾತಿ, ಪಂಗಡಗಳವರ ಗ್ಯಾರಂಟಿಗಳಿಗೆ ಪ್ರತ್ಯೇಕ ಅನುದಾನ ನೀಡಿಲ್ಲ. ಕಳೆದ ಮೂರು ವರ್ಷಗಳಿಂದ ಈ ಅನ್ಯಾಯ ಸರ್ಕಾರ ಮಾಡುತ್ತಲೇ ಇದೆ. ಇದರ ಪರಿಣಾಮವಾಗಿ ಎಸ್‌ಸಿ-ಎಸ್‌ಟಿ ನಿಗಮಗಳು ಆರ್ಥಿಕವಾಗಿ ದುರ್ಬಲವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಸ್ಲಿಂ ಸಮುದಾಯಗಳವರಿಗೆ ಹಲವು ರೀತಿಯ ವಿಶೇಷ ಅನುದಾನ ಸಿದ್ದರಾಮಯ್ಯ ನೀಡಿ, ಎಸ್‌ಸಿ-ಎಸ್‌ಟಿ ಸಮುದಾಯಗಳನ್ನು ನಿರ್ಲಕ್ಷಿಸಿರುವುದು ಸ್ಪಷ್ಟವಾಗಿದೆ. ಇದರ ವಿರುದ್ಧ ಸಮಿತಿ ಹೋರಾಟ ನಡೆಸಲಿದೆ ಎಂದು ಹೇಳಿದರು.
ಮುಖಂಡರಾದ ಶಿವಮಲ್ಲು, ದಿನೇಶ್, ಡಾ.ನವೀನ್ ಇದ್ದರು.