

ದಾವಣಗೆರೆ: ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ಅವರು ದಾವಣಗೆರೆಯ ಶಕ್ತಿನಗರದಲ್ಲಿ ಮಂಗಳವಾರ, ದಲಿತ ಮುಖಂಡ ಆಲೂರು ನಿಂಗರಾಜ್ ಅವರ ಮನೆಯಲ್ಲಿ ಪಾದಪೂಜೆ ಮಾಡಿಸಿಕೊಂಡರು.
ದಲಿತ ಕಾಲನಿ ಅಥವಾ ಮುಖಂಡರ ಮನೆಗೆ ತೆರಳುವ ಆಶಯ ವ್ಯಕ್ತಪಡಿಸಿದ ಪೇಜಾವರ ಶ್ರೀಗಳಿಗೆ ಜತೆಗಿದ್ದ ಆದಿಜಾಂಬವ ಮಠದ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ಸಲಹೆ ನೀಡಿದರು. ಭೇಟಿಯಿತ್ತ ಪೇಜಾವರ ಶ್ರೀಗಳಿಗೆ ಆಲೂರು ನಿಂಗರಾಜ್-ಹಾಲಮ್ಮ ದಂಪತಿ ಪಾದಪೂಜೆ ಮಾಡಿ ಸ್ವಾಗತಿಸಿದರು.
ದೇಶದಲ್ಲಿ ಶ್ರೀ ರಾಮಮಂದಿರ ಕಟ್ಟುವ ಕನಸು ಇತ್ತು. ಈಗದು ಈಡೇರುತ್ತಿದೆ. ರಾಮಮಂದಿರ ಜತೆಗೆ ರಾಮರಾಜ್ಯದ ಕನಸೂ ನನಸಾಗಬೇಕು. ಇದಕ್ಕಾಗಿ ಎಲ್ಲರ ನಿರಂತರ ಪ್ರಯತ್ನ ಆಗಬೇಕು ಎಂದು ಪೇಜಾವರ ಶ್ರೀಗಳು ಹೇಳಿದರು.
ಮುಖಂಡರಾದ ಎಚ್.ಎನ್.ಶಿವಕುಮಾರ್, ಕಲ್ಲಿಂಗಪ್ಪ, ಆಲೂರು ಕೆ.ಎಸ್.ಬಸವಂತಪ್ಪ, ಹೆದ್ನೆ ದಿವಾಕರ್, ಅಣಜಿ ಗುಡ್ಡೇಶ್, ಆಲೂರು ಮೂಗಪ್ಪ, ಲೋಕಿಕೆರೆ ತಿಪ್ಪೇಶ್, ಹುಲಿಕಟ್ಟೆ ಶಿವಣ್ಣ, ಅಣಜಿ ಬಸವರಾಜ್, ಕಳೂರು ಉಮೇಶ್, ನಿಂಗರಾಜ್ ಮಕ್ಕಳಾದ ನೈದಿಲೆ, ಸೌಜನ್ಯ, ಮಂದಾರ ಇತರರಿದ್ದರು.