

ಮೂಡಿಗೆರೆ: ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಮೂಡಿಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪರಿಶಿಷ್ಟರಿಗೆ ಯಾವುದೇ ಮೂಲ ಸೌಲಭ್ಯಗಳು ದೊರಕುತ್ತಿಲ್ಲ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈ ಜನಾಂಗವನ್ನು ನಿರ್ಲಕ್ಷಿೃಸುತ್ತಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮಂಜುನಾಥ್ ದೂರಿದರು.
ದಲಿತರ ಜೀವನಕ್ಕಾಗಿ ಜಮೀನು, ನಿವೇಶನ, ವಸತಿ, ಸ್ಮಶಾನ ಜಾಗ ಸೇರಿದಂತೆ ಮೂಲ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಮುಖಂಡರು ಶನಿವಾರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀರ್ ರಾಜಶೇಖರಮೂರ್ತಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಮೀಸಲು ಕ್ಷೇತ್ರದಲ್ಲಿ ಸ್ಮಶಾನ, ನಿವೇಶನ, ವಾಸದ ಮನೆ, ರಸ್ತೆ, ವಿದ್ಯುತ್, ಬೀದಿ ದೀಪ ಮತ್ತು ಜಮೀನಿಗಾಗಿ ದಲಿತ ವರ್ಗ ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ. ಭೂಗಳ್ಳರು ಕಬಳಿಸಿರುವ ಸರ್ಕಾರಿ ಜಾಗವನ್ನು ರಾಜ್ಯ ಸರ್ಕಾರ ಗುತ್ತಿಗೆ ಆಧಾರದಲ್ಲಿ ಭೂಗಳ್ಳರಿಗೇ ನೀಡಲು ಮುಂದಾಗಿದೆ. ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗದವರ ಮೇಲೆ ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿ ಇಲ್ಲ. ಹಿಂದುಳಿದ ವರ್ಗಗಳ ಏಳಿಗೆಗೆ ಯಾವುದೇ ಯೋಜನೆ ರೂಪಿಸಿಲ್ಲ. ರಾಜ್ಯದಲ್ಲಿ ದಲಿತ ವರ್ಗಕ್ಕೆ ಸಾಮಾಜಿಕ ನ್ಯಾಯ ಒದಗಿಸಬೇಕು. ದಲಿತರ ಬೇಡಿಕೆಗಳನ್ನು ಕೂಡಲೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಸಂತೋಷ್ ಮಾತನಾಡಿ, ರಾಜ್ಯ ಸರ್ಕಾರಕ್ಕೆ ದಲಿತರ ಮೇಲೆ ಕಾಳಜಿ ಇದ್ದಿದ್ದರೆ ಎಲ್ಲ ಬೇಡಿಕೆಗಳನ್ನು ಈಡೇರಿಸಬಹುದಿತ್ತು. ಸರ್ಕಾರವನ್ನು ಎಚ್ಚರಿಸಲು ರಾಜ್ಯದ ಎಲ್ಲ ತಾಲೂಕುಗಳಲ್ಲಿ ದಲಿತರ ಹಕ್ಕೊತ್ತಾಯಕ್ಕಾಗಿ ಧರಣಿ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುತ್ತಿದೆ. ಸರ್ಕಾರ ಕೂಡಲೆ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ನಾಗೇಶ್, ಮೇರಿ, ಪ್ರಮೀಳಾ, ಕಾವ್ಯಾ, ಸುಮಿತ್ರಾ ಇತರರಿದ್ದರು.