

ಚಾಮರಾಜನಗರ: ಗುಂಡ್ಲುಪೇಟೆಯ ಕಾಡಂಚಿನ ಪ್ರದೇಶವಾದ ಕಾರೇಮಾಳದಲ್ಲಿ ನಮಗೆ ಸೇರಿರುವ ಸುಮಾರು 2.20 ಎಕರೆ ಜಮೀನನ್ನು ಪ್ರಭಾವಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಖಾತೆ ಮಾಡಿಕೊಂಡಿದ್ದು, ದಲಿತರ ಜಮೀನು ಉಳಿಸಿಕೊಡಿ ಎಂದು ಸೋಲಿಗ ಮಹಿಳೆ ಪುಟ್ಟಮ್ಮ ಮನವಿ ಮಾಡಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದು ಕೊರತೆ ಸಭೆಯಲ್ಲಿ ಎಸ್ಟಿ, ಎಸ್ಟಿ ಸಮುದಾಯದ ಹಲವಾರು ಸಮಸ್ಯೆಗಳನ್ನು ಚರ್ಚಿಸಲಾಯಿತು.
ತಾಲೂಕಿನ ಚಿಕ್ಕಿಪ್ಪೆಹುಂಡಿ ಗ್ರಾಮದ ಎಸ್ಸಿ ಸಮುದಾಯದ ಸೋಮಾಜಮ್ಮ ಎಂಬುವವರ ಹೆಸರಿನಲ್ಲಿ ಉಗೇನದಹುಂಡಿ ಗ್ರಾಮದ ಸರ್ವೇ ನಂ.24 ರಲ್ಲಿ 1 ಎಕರೆ ಜಮೀನು ಇದೆ. ಅದನ್ನು ಉಗೇನದಹುಂಡಿ ಗ್ರಾಮದ ಲೇ.ಮಾದಪ್ಪ ಎಂಬುವವರು ಅಕ್ರಮವಾಗಿ ಖಾತೆ ಮಾಡಿಕೊಂಡಿದ್ದಾರೆ. ಈ ಸಂಬಂಧ ನೋಟಿಸ್ ನೀಡಿದಾಗ ದಲಿತ ಮಹಿಳೆ ಮೇಲೆ ಕೊತ್ತಲವಾಡಿ ಗ್ರಾಮದ ಮಾದಪ್ಪ, ಮಂಜುನಾಥ್ ಮತ್ತು ಉಗೇನದಹುಂಡಿ ಗ್ರಾಮದ ಮಹದೇವಪ್ಪ, ಮಂಗಳಮ್ಮ, ನೇತ್ರಾವತಿ ಹಾಗೂ ವಿನಯ್ ಅವರು ಜಾತಿನಿಂದನೆ ಮಾಡಿದ್ದಾರೆ. ಈ ಸಂಬಂಧ ದೂರು ದಾಖಲಾಗಿದ್ದರು ಪೊಲೀಸರು ಕ್ರಮವಹಿಸಿಲ್ಲ ಎಂದು ಮುಖಂಡ ವಾಸು ಹೊಂಡರಬಾಳು ಅವರು ದೂರಿದರು.
ಡಿವೈಎಸ್ಪಿ ಲಕ್ಷ್ಮಯ್ಯ ಪ್ರತಿಕ್ರಿಯಿಸಿ, ಅವರು ಅಕ್ರಮವಾಗಿ ಖಾತೆ ಮಾಡಿಕೊಂಡಿದ್ದಾರೆ ಎಂದು ತನಿಖೆಯಿಂದ ತಿಳಿಯಬೇಕಿದೆ. ಬಳಿಕ ಅವರ ಮೇಲೆ ಕ್ರಮವಹಿಸಲಾಗುತ್ತದೆ ಎಂದು ಹೇಳಿದರು.