

ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರಸ್ ಸರ್ಕಾರದಲ್ಲಿ ದಲಿತರ ಎಸ್‌ಸಿ,ಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಯ ಹಣವನ್ನು ಗ್ಯಾರೆಂಟಿ ಯೋಜನೆಗಳಿಗೆ ಹಂಚಿಕೆ ಮಾಡಿರುವುದು ಖಂಡನಿಯ ತಕ್ಷಣವೇ ಆ ಹಣವನ್ನು ದಲಿತರ ಅಭಿವೃದ್ಧಿಗೆ ಬಳಸಬೇಕು ಎಂದು ಒತ್ತಾಯಿಸಿ ದಲಿತ ಹಕ್ಕುಗಳ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಸಮಿತಿಯ ರಾಜ್ಯ ಘಟಕದ ಕಾರ್ಯದರ್ಶಿ ಎಂ.ಜಿ ಪೃಥ್ವಿ, ದಲಿತರನ್ನು ಆರ್ಥಿಕವಾಗಿ ಅಭಿವೃದ್ಧಿಪಡಿಸಲು ಸಂವಿಧಾನ ಬದ್ಧವಾಗಿ ದೊರೆತ ಅನುದಾನವನ್ನು ಸರ್ಕಾರಗಳು ಸರಿಯಾಗಿ ಬಳಕೆ ಮಾಡಿಕೊಳ್ಳದೆ ಇತರೆ ಯೋಜನೆಗಳಿಗೆ ವಿನಿಯೋಗಿಸುವ ಮೂಲಕ ಅನ್ಯಾಯ ಮಾಡಿದ್ದಾರೆ ದಲಿತರ ಉದ್ದಾರಕ್ಕೆ ಮೀಸಲಿಟ್ಟ ಹಣವನ್ನು ಸಮರ್ಪಕವಾಗಿ ಬಳಕೆಯಾಗದೆ ಮೂಗಿಗೆ ತುಪ್ಪ ಸವರುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್‌ಸಿ ಎಸ್ ಪಿ ಮತ್ತು ಟಿ ಎಸ್ ಪಿ ಯೋಜನೆಯಲ್ಲಿ ಮೀಸಲಿಟ್ಟ ದಲಿತರ ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ಬಳಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಈ ಯೋಜನೆಗಳಿಗೆ ಮೀಸಲಿಡಲಾಗಿದ್ದ ಲಕ್ಷಾಂತರ ಕೋಟಿ ಹಣವನ್ನು ಸರ್ಕಾರ ಗಳಿಂದಲೇ ದುರುಪಯೋಗವಾಗುತ್ತಿರುವುದು ಸಂವಿಧಾನ ಮತ್ತು ದಲಿತ ವಿರೋಧಿಯಾಗಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ 2014ರಿಂದ 10 ವರ್ಷಗಳಲ್ಲಿ 2,94,963 ಕೋಟಿ ದಲಿತರ ಅಭಿವೃದ್ಥಿಗೆ ಹಣ ಮೀಸಲಿಡಲಾಗಿದೆ. 2023-24 ಮತ್ತು 2024 -25ನೇ ಸಾಲಿನ ಎರಡು ವರ್ಷಗಳಲ್ಲಿ 25,398 ಕೋಟಿ ಹಣವನ್ನು ಸರ್ಕಾರ ಕಾಯ್ದೆಯ 7 ಸಿ ಅಡಿಯಲ್ಲಿ ಗ್ಯಾರಂಟಿ ಯೋಜನೆ ಗಳಿಗೆ ಹಂಚಿರುವುದು ಸಿದ್ದರಾಮಯ್ಯ ಸರ್ಕಾರ ದಲಿತರಿಗೆ ಮಾಡಿದ ವಂಚನೆಯಾಗಿದೆ ಎಂದು ದೂರಿದರು.
ಇದು ವರೆಗೆ ಸುಮಾರು 70,000 ಕೋಟಿಯಷ್ಟು ದಲಿತರಿಗಾಗಿ ಮೀಸಲಿದ್ದ ಹಣವನ್ನು ಎಲ್ಲ ಸರ್ಕಾರಗಳು ದುರುಪಯೋಗ ಮಾಡಿರುವುದು ತೀವ್ರ ಖಂಡನಿಯ.ಈ ರೀತಿ ದಲಿತರ ಹಣವನ್ನು ದುರುಪಯೋಗಪಡಿಸಿಕೊಂಡು ಇತರ ಯೋಜನೆಗಳಿಗೆ ಬಳಕೆ ಮಾಡಿರುವುದು ದಲಿತ ಹಕ್ಕುಗಳ ಸಮಿತಿ ಬಲವಾಗಿ ಖಂಡಿಸುತ್ತದೆ ಎಂದರು.
ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಂಡು ಗ್ಯಾರಂಟಿ ಯೋಜನೆ ಸೇರಿದಂತೆ ಮತ್ತಿತರ ಯೋಜನೆಗಳಿಗೆ ಹಂಚಲ್ಪಟ್ಟಿರುವ ಎಸ್ಸಿ ಎಸ್ ಪಿ ಮತ್ತು ಟಿ ಎಸ್ ಪಿ ಯ ಯೋಜನೆಯ ಹಣವನ್ನು ಸಮರ್ಪಕವಾಗಿ ದಲಿತರಿಗೆ ಬಳಸಬೇಕು ಎಂದು ಆಗ್ರಹಿಸಿದರು .
ಕೂಡಲೇ ಸರ್ಕಾರ ದಲಿತರ ಜನಸಂಖ್ಯೆಗೆ ಅನುಗುಣವಾಗಿ ಇನ್ನು ಹೆಚ್ಚು ಹಣ ಮೀಸಲಿಟ್ಟು ಅವರ ಸಮಗ್ರ ಅಭಿವೃದ್ಧಿಗೆ ಮಾತ್ರವೇ ಹಣವನ್ನು ಬಳಕೆ ಮಾಡಬೇಕೆಂದು ಒತ್ತಾಯಿಸುತ್ತೇವೆ. ಕಾಯ್ದೆ 7ಸಿ ರದ್ದುಗೊಳಿಸಬೇಕೆಂದು ಆಗ್ರಹಿಸಿದ್ದು ಜಯಪ್ರಕಾಶ್ ಹೆಗಡೆಯವರ ಜಾತಿಗಣತಿ
ವರದಿಯನ್ನು ಬಿಡುಗಡೆಗೊಳಿಸಬೇಕೆಂದು ಇದೇ ವೇಳೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಸಮಿತಿಯ ರಾಜು ಸಿಗರನಹಳ್ಳಿ, ಪ್ರಸನ್ನ ಕುಮಾರ್ ಇತರರು ಇದ್ದರು