ದಲಿತರ ಅನುದಾನ ಬಳಕೆ ಕುರಿತು ಶ್ವೇತಪತ್ರ ಹೊರಡಿಸಿ

04rajesh3
Published on

ಚಾಮರಾಜನಗರ: ರಾಜ್ಯ ಕಾಂಗ್ರೆಸ್ ಸರ್ಕಾರ ಕಳೆದ 10 ವರ್ಷಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಖರ್ಚು ಮಾಡಿದ ಅನುದಾನದ ಕುರಿತು ಶ್ವೇತಪತ್ರ ಹೊರಡಿಸಬೇಕು, ಎಸ್ಸಿಎಸ್ಪಿ, ಟಿಎಸ್ಪಿ ಕಾಯ್ದೆಯ 7ಸಿ ಯನ್ನು ರದ್ದುಗೊಳಿಸಬೇಕು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅರಕಲವಾಡಿ ನಾಗೇಂದ್ರ ಆಗ್ರಹಿಸಿದರು.

ರಾಜ್ಯಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಕಳೆದ 2 ವರ್ಷಗಳಿಂದ ಅನ್ಯ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುವ ಮೂಲಕ ದಲಿತ ಸಮುದಾಯಕ್ಕೆ ದ್ರೋಹ ಎಸಗಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025-26 ನೇ ಸಾಲಿನ ಬಜೆಟ್ ಮಂಡಿಸಲಿದ್ದು, ಈ ಸಾಲಿನಲ್ಲೂ ಎಸ್ಸಿಎಸ್ಪಿ, ಟಿಎಸ್ಪಿ ಹಣದಲ್ಲಿ ಸುಮಾರು 14,448 ಕೋಟಿ ರೂ, ಗಳನ್ನು ಗ್ಯಾರಂಟಿ ಮತ್ತು ಇನ್ನಿತರೆ ಯೋಜನೆಗಳಿಗೆ ಬಳಕೆ ಮಾಡಲು ಮುಂದಾಗಿರುವುದು ಅತ್ಯಂತ ಖಂಡನೀಯ ಎಂದು ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ಈಗಾಗಲೇ ಬಿಜೆಪಿ ವತಿಯಿಂದ ಎಸ್ಸಿಎಸ್ಪಿ, ಟಿಎಸ್ಪಿ ಅನುದಾನ ದುರ್ಬಳಕೆ ಸಂಬಂಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗಿದ್ದು, ದಲಿತ ಸಮುದಾಯಗಳಲ್ಲಿ ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಎಸ್ಸಿಎಸ್ಪಿ, ಟಿಎಸ್ಪಿ ಕಾಯ್ದೆಯ 7ಸಿ ಅಡಿಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ, ಮೂಲ ಸೌಕರ್ಯ ಇತರೆ ಸಮುದಾಯಗಳು ಭಾಗಿಯಾಗುವ ಯೋಜನೆಯಲ್ಲಿ ಎಸ್ಸಿ, ಎಸ್ಟಿಗಳು ಇದ್ದರೇ ಅನುದಾನ ಬಳಕೆ ಮಾಡಬಹುದು ಎಂದು ಹೇಳಲಾಗಿದೆ. ಈ ನಿಟ್ಟಿನಲ್ಲಿ ಕಾಯ್ದೆಯ 7ಡಿಯನ್ನು ರದ್ದು ಮಾಡಿದಂತೆ 7ಸಿ ಯನ್ನು ರದ್ದು ಮಾಡಬೇಕು. ಕಳೆದ 2 ವರ್ಷಗಳಿಂದ ರಾಜ್ಯ ಸರ್ಕಾರ ಎಸ್ಸಿಎಸ್ಪಿ, ಟಿಎಸ್ಪಿ ಅನುದಾನ ಬಳಕೆ ಮಾಡಿರುವ ಕುರಿತು ಶ್ವೇತ ಪತ್ರವನ್ನು ಹೊರಡಿಸಬೇಕು. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳಿಗೆ ದಲಿತರಿಗೆ ಮೀಸಲಿಟ್ಟ ಅನುದಾನವನ್ನು ಬಳಕೆ ಮಾಡಬಾರದು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಮೂಡಹಳ್ಳಿ ಮೂರ್ತಿ, ಪ್ರಧಾನ ಕಾರ್ಯದರ್ಶಿ ಮುತ್ತಿಗೆ ಮೂರ್ತಿ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಚಂದ್ರು, ಪ್ರಧಾನ ಕಾರ್ಯದರ್ಶಿ ರಾಮಣ್ಣ, ಕೋಶಾಧ್ಯಕ್ಷ ರಘು, ಮುಖಂಡ ಸುರೇಶ್, ಮಾಧ್ಯಮ ಪ್ರಮುಖ್ ಶಿವಣ್ಣ ಹಾಜರಿದ್ದರು.

ಬಾಯಿಕಟ್ಟಿದ ಶಾಸಕರು:

ರಾಜ್ಯ ಸರ್ಕಾರ ಕಳೆದ 2 ವರ್ಷಗಳಿಂದಲೂ ದಲಿತರಿಗೆ ಮೀಸಲಿಟ್ಟ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡುವ ಮೂಲಕ ವಂಚನೆ ಮಾಡುತ್ತಿದೆ. ಆದರೇ ಮೀಸಲು ಕ್ಷೇತ್ರಗಳಿಂದ ಚುನಾಯಿತರಾಗಿರುವ ರಾಜಕಾರಣಿಗಳು ಬಾಯಿಕಟ್ಟಿದವರಂತಾಗಿದ್ದಾರೆ. ಅದರಲ್ಲೂ ಕಾಂಗ್ರೆಸ್ ಪಕ್ಷದ ಕೆಲವು ದಲಿತ ಸಚಿವರು ಇದನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಮೀಸಲು ಕ್ಷೇತ್ರಗಳಿಂದ ಆಯ್ಕೆಯಾದ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಇದಕ್ಕೆ ಕಾರಣವಾಗಿದೆ ಎಂದು ಅರಕಲವಾಡಿ ನಾಗೇಂದ್ರ ಖಂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net