ದಲಿತರ 11 ಸಾವಿರ ಕೋಟಿ ರೂ. ದುರುಪಯೋಗ:ಶಾಸಕ ಸಿಮೆಂಟ್ ಮಂಜು ಆರೋಪ

ದಲಿತರ 11 ಸಾವಿರ ಕೋಟಿ ರೂ. ದುರುಪಯೋಗ:ಶಾಸಕ ಸಿಮೆಂಟ್ ಮಂಜು ಆರೋಪ
Published on

ಹಾಸನ: ನಾನು ಎಸ್‌ಸಿ ಮೀಸಲು ಕ್ಷೇತ್ರದ ಶಾಸಕನಾಗಿರುವುದರ ಜತೆಗೆ ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಘಟಕದ ಅಕ್ಷನಾಗಿದ್ದೇನೆ. ಕಾಂಗ್ರೆಸ್ ಸರ್ಕಾರ ಸುಮಾರು 11 ಸಾವಿರ ಕೋಟಿ ರೂ. ದಲಿತರ ಹಣವನ್ನು ಗ್ಯಾರಂಟಿ ಸೇರಿದಂತೆ ಬೇರೆ ಬೇರೆ ಉದ್ದೇಶಗಳಿಗೆ ಬಳಕೆ ಮಾಡಿಕೊಂಡಿದೆ ಎಂದು ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಆರೋಪಿಸಿದರು.
ದಲಿತರ ಕಲ್ಯಾಣಕ್ಕೆ ಪೂರಕವಾಗಿರುವ ಕೊಳವೆಬಾವಿ ನಿರ್ಮಾಣ, ಸ್ವಯಂ ಉದ್ಯೋಗ ಸಾಲ ಸೇರಿದಂತೆ ಯಾವುದೇ ಯೋಜನೆಗಳಿಗೆ ಅನುದಾನ ನೀಡುತ್ತಿಲ್ಲ. ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ. ದುರ್ಬಳಕೆಯಾಗಿದೆ. ಇದರಿಂದ ದಲಿತರ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಅಹಿಂದದ ಪ್ರಬಲ ನಾಯಕರಾಗಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ದಲಿತರು, ಬಡವರ ಮೇಲೆ ಕಾಳಜಿ ಇದ್ದರೆ ರಾಜೀನಾಮೆ ಕೊಡಬೇಕಿತ್ತು. ಬಡವರ ಪರವಾದ ಕಾರ್ಯಕ್ರಮಗಳನ್ನು ಏನನ್ನೂ ಮಾಡದ ಸರ್ಕಾರ, ದಲಿತರ ಹಣವನ್ನೇ ಖರ್ಚು ಮಾಡುವುದರ ಜತೆಗೆ ಜನ ಸಾಮಾನ್ಯರು ಬಳಸುವ ಹಾಲು, ಪೆಟ್ರೋಲ್ ಬೆಲೆ ಹೆಚ್ಚಳ ಮಾಡುತ್ತಿರುವುದು ವಿಷಾದನೀಯ ಎಂದರು.
ಡೆಂೆ ತಡೆಗೆ ಕೇವಲ ಸಭೆ ಮಾಡಿದರೆ ಆಗಲ್ಲ, ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು. ಜನರ ಜೀವ ಉಳಿಯಬೇಕಾದರೆ ಅಧಿಕಾರಿಗಳು ಕಚೇರಿ ಬಿಟ್ಟು ಹೊರ ಬರಬೇಕು. ಈ ಸರ್ಕಾರದಲ್ಲಿ ಸರ್ಕಾರಿ ಕಾರ್ಯಕ್ರಮ ವೇಳೆ ಶಿಷ್ಟಾಚಾರ ಪಾಲನೆಯಾಗುತ್ತಿಲ್ಲ. 2 ಲಕ್ಷ ರೂ. ಪರಿಹಾರ ಕೊಡಲು 10 ಲಕ್ಷ ಖರ್ಚು ಮಾಡಿಕೊಂಡು ಬರುತ್ತಾರೆ. ಆನೆ ದಾಳಿಯಿಂದ ಗಾಯಗೊಂಡವರ ಚಿಕಿತ್ಸೆಗೆ ಹಣ ಸಿಗುತ್ತಿಲ್ಲ. ಅರ್ಜುನ ಸ್ಮಾರಕ್ಕೆ 5 ಕೋಟಿ ನೀಡಿ, ಆನೆ ಹೆಸರಿನಲ್ಲಿ ಆನೆಧಾಮ ಮಾಡಿದ್ದರೆ, ಪ್ರವಾಸಿ ತಾಣ ಮಾಡಿದ್ದರೆ ಅರ್ಥ ಬರುತ್ತಿತ್ತು. ಆದರೆ ಈ ಮನವಿಗೆ ಸ್ಪಂದನೆ ಸಿಗಲಿಲ್ಲ ಎಂದು ಬೇಸರ ಹೊರ ಹಾಕಿದರು.
ನಮ್ಮ ತಾಲೂಕಿನಲ್ಲಿ ಸರ್ಕಾರಿ ಕಾರ್ಯಕ್ರಮದಲ್ಲಿ ಪರಾಜಿತ ಅಭ್ಯರ್ಥಿ ಇರುತ್ತಾರೆ. ಇದು ಹೀಗೆಯೇ ಮುಂದುವರಿದರೆ ವಿಧಾನಸಭೆ ಅಧ್ಯಕ್ಷರಿಗೆ ದೂರು ನೀಡುತ್ತೇನೆ. ನಾನು ಆಲೂರು-ಸಕಲೇಶಪುರ ಶಾಸಕ ಆಗಿದ್ದೇನೆ. ಅಧಿಕಾರಿಗಳು ಯಾರಿಗೂ ಹೆದರದೆ ಕೆಲಸ ಮಾಡಿ ಎನ್ನುವ ಮೂಲಕ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಮುರಳಿ ಮೋಹನ್‌ಗೆ ಟಾಂಗ್ ನೀಡಿದರು.

ಮೆಡಿಕಲ್ ಎಮರ್ಜೆನ್ಸಿ ಘೋಷಿಸಿ:
ರಾಜ್ಯ ಬಿಜೆಪಿ ವಕ್ತಾರ ಮೋಹನ್ ವಿಶ್ವ ಮಾತನಾಡಿ, ರಾಜ್ಯದೆಲ್ಲೆಡೆ ಡೆಂೆ ವ್ಯಾಪಕವಾಗಿ ಹಬ್ಬಿದೆ. ಸಿಎಂ ಸಿದ್ದರಾಮಯ್ಯ ಅವರು ಈಗ ಟಾಸ್ಕ್ ಫೋರ್ಸ್ ರಚನೆ ಬಗ್ಗೆ ಮಾತನಾಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಬಂದರೂ ಅಧಿಕಾರಿಗಳ ಸಭೆ ಮಾಡಲಿಲ್ಲ. ಜಿಲ್ಲೆಯ ಸಮಸ್ಯೆ ಬಿಟ್ಟು ಅವರಿಗೆ ರಾಜಕೀಯವೇ ಮುಖ್ಯವಾಗಿದೆ. ಹಾಗಾಗಿ ರಾಜ್ಯದಲ್ಲಿ ಮೆಡಿಕಲ್ ಎಮರ್ಜೆನ್ಸಿ ಘೋಷಿಸಿ ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ ಈವರೆಗೂ ರಾಜ್ಯ ಸರ್ಕಾರ ಎಲ್ಲಾ ವಿಷಯದಲ್ಲೂ ಬೇಜವಾಬ್ದಾರಿ, ನಿರ್ಲಕ್ಷ್ಯ ತೋರುತ್ತಿದೆ. ಕೇವಲ ರಾಜಕೀಯದಲ್ಲಿ ಮುಳುಗಿರುವ ಸರ್ಕಾರ, ಸಾಮಾನ್ಯ ಜನರ ಹಿತ ಮರೆತಿದೆ. ಕಾಂಗ್ರೆಸ್ ಸರ್ಕಾರ ಒಂದಲ್ಲ, ಒಂದು ರೀತಿಯ ಹಗರಣದಲ್ಲೇ ಮುಳುಗಿದೆ. ವಾಲ್ಮೀಕಿ ನಿಗಮದ ಹಗರಣ ನಂತರ ಒಂದೊಂದೇ ತೆರೆದುಕೊಳ್ಳುತ್ತಿವೆ. ಹಗರಣ, ರಾಜಕೀಯದಲ್ಲೇ ಕಾಲಹರಣ ಮಾಡುತ್ತಿರುವ ಸರ್ಕಾರ, ಡೆಂೆ ಮತ್ತು ಅತಿವೃಷ್ಟಿಯಿಂದ ಜನರು, ರೈತರು, ಸಂಕಷ್ಟಕ್ಕೆ ಸಿಲುಕಿದರೂ ತಲೆ ಕೆಡಿಸಿಕೊಂಡಿಲ್ಲ ಎಂದು ಕಿಡಿ ಕಾರಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿಗಳಾದ ಅಮಿತ್ ಶೆಟ್ಟಿ, ಗಿರೀಶ್, ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹರ್ಷಿತ್ ಮುಖಂಡ ಮಂಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net