

ಕಲಬುರಗಿ: ದಲಿತ, ಹಿಂದುಳಿದವರು, ದೀನರು ಎಂದು ಹೇಳಿಕೊಂಡು ಎಷ್ಟು ದಿನ ಅಂತಾ ಜೀವನ ಸಾಗಿಸಬೇಕು. ಸಾಧನೆ ಮಾಡಿ ಸಾಧಕರಾಗಿ ಸಾಯೋಣ. ಬೌದ್ಧ ಸಂಸ್ಕಾರವನ್ನು ಪಡೆಯಬೇಕು ಎಂದು ಹಿರಿಯ ಸಾಹಿತಿ ಡಾ.ಹನುಮಂತರಾವ ದೊಡ್ಡಮನಿ ಆಗ್ರಹಿಸಿದರು.
ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಏರ್ಪಡಿಸಿದ್ದ ಜಿಲ್ಲಾ ಪ್ರಥಮ ದಲಿತ ಚಳವಳಿ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಚಳವಳಿಯಿಂದ ಸಾಹಿತ್ಯ ಹುಟ್ಟುತ್ತದೆ. ಸಾಹಿತ್ಯದಿಂದ ಚಳವಳಿಗೆ ಶಕ್ತಿ ಬರುತ್ತದೆ. ಬುದ್ಧ ಬಸವ, ಅಂಬೇಡ್ಕರ್ ಚಳವಳಿ ಮಾಡಿದ್ದರಿಂದಲೇ ಹೊಸ ಸಾಹಿತ್ಯ ರಚನೆ ಆಯಿತು ಎಂದು ಹೇಳಿದರು.
ಸಮ್ಮೇಳನವೂ ಹೋರಾಟಕ್ಕೆ, ಸಾಹಿತ್ಯಕ್ಕೆ ದಿಕ್ಸೂಚಿ ಆಗಬೇಕು. ನಮ್ಮ ನೆಲದ ಮಣ್ಣಿನ ವಾಸನೆ ಸಮ್ಮೇಳನ ಸಾರಬೇಕು. ದಲಿತ ಸಾಹಿತ್ಯ ಮತ್ತು ಚಳವಳಿ ಒಂದು ನಾಣ್ಯದ ಎರಡು ಮುಖಗಳು ಇದ್ದಂತೆ ಎಂದು ಹೇಳಿದರು.
ಕೇಂದ್ರೀಯ ವಿವಿ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ ಮಾತನಾಡಿ, ದಲಿತ ಚಳವಳಿ ಇಲ್ಲದೆ ದಲಿತ ಸಾಹಿತ್ಯ ಇಲ್ಲ. ಹೋರಾಟದ ಸಾಗರಕ್ಕೆ ನೂರಾರು ನದಿಗಳು ಎನ್ನುವಂತೆ ಚಳವಳಿಯೇ ಸಾಹಿತ್ಯ ರಚನೆಗೆ ಪ್ರೇರಣೆ ನೀಡಿತು. ಚರಿತ್ರೆಯ ಹೋರಾಟದ ನೆನಪುಗಳನ್ನು ಮಾಡುತ್ತ ನಮ್ಮ ನಾಳೆಯ ಚರಿತ್ರೆ ಕಟ್ಟಿಕೊಳ್ಳಬೇಕು ಎಂದರು.
ಜಗದ್ಗುರು ಶ್ರೀ ಡಾ. ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿದರು. ಅಣದೂರದ ಪೂಜ್ಯ ಬಂತೆಜೀ ವರಜ್ಯೋತಿ ಥೇರೋ, ಬುದ್ಧವಿಹಾರದ ಸಂಘಾನAದ ಬಂತೆಜೀ, ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ, ಶಿವರಾಜ ಅಂಡಗಿ, ಶರಣರಾಜ ಚಪ್ಪರಬಂಧಿ, ಧರ್ಮಣ್ಣ ಧನ್ನಿ, ಡಾ.ವಿಷ್ಣುವರ್ಧನ, ಸುರೇಶ ಹಾದಿಮನಿ, ಕಲ್ಯಾಣರಾವ ಶೀಲವಂತ ಇತರರಿದ್ದರು.