

ಸಿಂದಗಿ: ರಾಜ್ಯ ಸರ್ಕಾರ ದಲಿತ ಸಮುದಾಯಗಳ ಅಭಿವೃದ್ಧಿ ಮೀಸಲು ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುವುದನ್ನು ಖಂಡಿಸಿ ದಲಿತ ವಿದ್ಯಾರ್ಥಿ ಪರಿಷತ್‌ನ ಪದಾಧಿಕಾರಿಗಳು ಬುಧವಾರ ಶಿರಸ್ತೇದಾರ ಎಸ್.ಐ. ಚವ್ಹಾಣ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ದಲಿತ ವಿದ್ಯಾರ್ಥಿ ಪರಿಷತ್ತಿನ ಬೆಳಗಾವಿ ವಿಭಾಗದ ಉಪಾಧ್ಯಕ್ಷ ಹರ್ಷವರ್ಧನ ಪೂಜಾರಿ ಮಾತನಾಡಿ, ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಮೀಸಲಿಟ್ಟ ಅನುದಾನ 11 ಸಾವಿರ ಕೋಟಿ ಹಣವನ್ನು ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸುವುದಾಗಿ ಹೇಳುವ ಮೂಲಕ ದಲಿತ ಸಮುದಾಯಗಳ ಅಭಿವೃದ್ಧಿಗೆ ಬರೆ ಹಾಕಿದೆ. ಶೋಷಿತ ಸಮುದಾಯಗಳ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಈ ಹಣವನ್ನು ಗ್ಯಾರಂಟಿಗೆ ಯೋಜನೆಗಳಿಗೆ ಬಳಸದೇ, ಸಮುದಾಯದ ವಿದ್ಯಾರ್ಥಿ, ಯುವಜನತೆಯ ಜತೆಗೆ ನಿರುದ್ಯೋಗಿಗಳ ಸಬಲತೆಗೆ, ಮಹಿಳೆಯರ, ರೈತ ಕೂಲಿಕಾರ್ಮಿಕರ ಅಭಿವೃದ್ಧಿಗೆ ಬಳಸಬೇಕು ಎಂದು ಸಿಎಂಗೆ ಒತ್ತಾಯಿಸಿದರು.
ಮನವಿ ಸಲ್ಲಿಸುವ ಸಮಯದಲ್ಲಿ ಕಲ್ಲಪ್ಪ ರಡ್ಡಿ, ಜೈಭೀಮ ರಡ್ಡಿ, ಮುತ್ತು ಗುತ್ತರಗಿ, ವಿಶ್ವನಾಥ ಹರಿಜನ, ಅಶೋಕ ಮುರುಡಿ ಇತರರಿದ್ದರು.