ದಲಿತ ಸಮುದಾಯಕ್ಕೆ ಧಕ್ಕೆಯಾಗುವ ಕೆಲಸ ಮಾಡಿಲ್ಲ

08HDK2
ಎಚ್.ಡಿ.ಕೋಟೆ ತಾಲೂಕಿನ ಹ್ಯಾಂಡ್‌ಪೋಸ್ಟ್‌ನ ಕಪಿಲಾ ಸಭಾಂಗಣದಲ್ಲಿ ಆಯೋಜಿಸಿದ್ದ ಜೆಡಿಎಸ್ ದಲಿತ ಸಮುದಾಯದ ಮುಖಂಡರ ಸಭೆಯಲ್ಲಿ ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ಮಾತನಾಡಿದರು.
Published on

ಎಚ್.ಡಿ.ಕೋಟೆ: ಐವತ್ತು ವರ್ಷಗಳಿಂದ ತಾಲೂಕಿನಲ್ಲಿ ರಾಜಕಾರಣ ಮಾಡುತ್ತಿದ್ದು, ಈವರೆಗೂ ದಲಿತ ಸಮುದಾಯಕ್ಕೆ ಧಕ್ಕೆಯುಂಟು ಮಾಡಿಲ್ಲ ಎಂದು ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ತಿಳಿಸಿದರು.

ತಾಲೂಕಿನ ಹ್ಯಾಂಡ್‌ಪೋಸ್ಟ್ ನ ಕಪಿಲಾ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಜೆಡಿಎಸ್ ದಲಿತ ಸಮುದಾಯ ಮುಖಂಡರ ಸಭೆಯಲ್ಲಿ ಮಾತನಾಡಿ, ನಾಯಕ ಸಮುದಾಯದ ತಾಲೂಕು ಹಾಗೂ ಜಿಲ್ಲಾಧ್ಯಕ್ಷನಾಗಿ, ಜಿಲ್ಲಾ ಪರಿಷತ್ ಮತ್ತು ಜಿಪಂ ಸದಸ್ಯನಾಗಿ, ಶಾಸಕನಾಗಿದ್ದ ಸಂದರ್ಭದಲ್ಲಿಯೂ ದಲಿತ ಸಮುದಾಯಕ್ಕೆ ವಿರುದ್ಧವಾಗಿ ನಡೆದುಕೊಂಡಿಲ್ಲ. ಬದಲಾಗಿ ಸಮುದಾಯಕ್ಕೆ ಬೆಂಬಲವಾಗಿ ನಿಂತಿದ್ದೇನೆ ಎಂದರು.

ತಾಲೂಕಿನ ಕೆಂಚನಹಳ್ಳಿ ಗ್ರಾಮದಲ್ಲಿ ಅರಣ್ಯಕ್ಕೆ ಸೇರಿದ ಜಮೀನನ್ನು ದಲಿತ ಸಮುದಾಯ ಒತ್ತುವರಿ ಮಾಡಿಕೊಂಡಿದೆ ಎಂದು ಅರಣ್ಯ ಇಲಾಖೆಯವರು ಜೆಸಿಬಿ ಮೂಲಕ ತೆರವುಗೊಳಿಸಲು ಮುಂದಾದರು. ಈ ಸಂದರ್ಭ ನಾನು ಜನಾಂಗದ ಪರವಾಗಿದ್ದೆ. ಅಲ್ಲದೆ ತೆರಣಿಮುಂಟಿ ಗ್ರಾಮದ ಜಮೀನು ವಿಚಾರದಲ್ಲಿ ದಲಿತರ ಪರವಾಗಿ ನಿಲ್ಲಬೇಡಿ ಎಂದು ಕೆಲವರು 50 ಲಕ್ಷ ರೂ. ಆಮಿಷವೊಡ್ಡಿದರು. ಎಲ್ಲವನ್ನೂ ಮೀರಿ ಸಮುದಾಯದ ಪರವಾಗಿ ಕೆಲಸ ಮಾಡಿದೆ. ಆದರೂ ಕೆಲವರು ನನ್ನನ್ನು ಸಮುದಾಯದ ವಿರೋಧಿ ಎಂದು ಅಪ್ರಚಾರ ಮಾಡಿದರು ಎಂದು ಬೇಸರ ವ್ಯಕ್ತಪಡಿಸಿದರು.

ನನ್ನ ಪುತ್ರ ಜಯಪ್ರಕಾಶ್ ಚಿಕ್ಕಣ್ಣ ಪದವೀಧರ. ಯಾವುದೇ ಕೆಟ್ಟ ಹವ್ಯಾಸ ಇಲ್ಲ. ಎಲ್ಲ ಸಮುದಾಯವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಗುಣ ಅವನಲ್ಲಿದೆ. ಅವನನ್ನು ಬೆಂಬಲಿಸಬೇಕಿದೆ ಎಂದು ಮನವಿ ಮಾಡಿದರು.

ಮುಖಂಡ ಎಸ್.ಎಲ್.ರಾಜಣ್ಣ ಮಾತನಾಡಿ, ಈ ಹಿಂದಿನ ಎಲ್ಲ ಚುನಾವಣೆಯಲ್ಲಿ ಬಲಗೈ ಸಮಾಜ ಶೇ.50 ಮತವನ್ನು ಜೆಡಿಎಸ್‌ಗೆ ನೀಡುತ್ತಿದೆ. ಆದರೂ ನಮ್ಮನ್ನು ಜೆಡಿಎಸ್ ವಿರೋಧಿಗಳೆಂದು ಹೇಳಲಾಗುತ್ತಿದೆ. ಹಾಗಾಗಿ ಈ ಚುನಾವಣೆಯಲ್ಲಿ ಒಗ್ಗಟ್ಟಾಗಿ ಇದ್ದೇವೆ ಎಂಬುದನ್ನು ತೋರಿಸಬೇಕಾಗಿದೆ ಎಂದರು.

ಕೆಲವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಚಿಕ್ಕಣ್ಣ ಅವರ ಕುಟುಂಬದ ಮೇಲೆ ಜಾತಿ ಬಣ್ಣ ಕಟ್ಟುತ್ತಿದ್ದಾರೆ. ಹಾಗಾಗಿ ಯಾರು ಕೂಡ ಕಿವಿಗೊಡಬಾರದು ಎಂದು ಕೋರಿದರು.
ಸಭೆಯಲ್ಲಿ ಜೆಡಿಎಸ್ ಸಂಭವನೀಯ ಅಭ್ಯರ್ಥಿ ಜಯಪ್ರಕಾಶ್ ಚಿಕ್ಕಣ್ಣ, ಪಕ್ಷದ ಸರಗೂರು ತಾಲೂಕು ಅಧ್ಯಕ್ಷ ಗೋಪಾಲಸ್ವಾಮಿ, ಮುಖಂಡರಾದ ನಂಜುಂಡಮೂರ್ತಿ, ಸರಗೂರು ಶಿವಣ್ಣ, ಎಂ.ಡಿ.ಮಂಚಯ್ಯ, ಮಲ್ಲೇಶ, ಹೈರಿಗೆ ನಾಗರಾಜು, ಹೆಗ್ಗಡಪುರ ಚಂದ್ರು, ನಂಜುಂಡರಾಜು, ಪ್ರಭಾಕರ್, ವೀಣಾ, ಪರಶಿವಮೂರ್ತಿ, ಜಕ್ಕಹಳ್ಳಿ ಪರಶಿವ, ನರಸಿಂಹೇಗೌಡ, ರಂಗೇಗೌಡ, ನಾಗನಾಯಕ, ಸುರೇಂದ್ರ, ರಾಜೇಂದ್ರ, ನಾಗರಾಜು, ರಾಜಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net