ಮೈಸೂರು: ಸುಳ್ಳು ಆರೋಪದ ಮೇಲೆ ದಲಿತ ಸಮುದಾಯದ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಕುರಿತು ದೂರು ಕೇಳಿಬಂದಿದೆ.
ನಂಜನಗೂಡು ತಾಲೂಕಿನ ಶಿರಮಳ್ಳಿಯ ಸಿದ್ದಮ್ಮ ಎಂಬುವವರ ಕುಟುಂಬಕ್ಕೆ ಅವರದೇ ದಲಿತ ಸಮುದಾಯದ ಮಹದೇವಸ್ವಾಮಿ, ಶಿವರಾಜು, ಹುಚ್ಚಯ್ಯ, ಸುರೇಶ್, ಸಿದ್ದರಾಜು ಎಂಬುವವರ ಹಳೇ ದ್ವೇಷದ ಕಾರಣದಿಂದ ಕಳೆದ ಮೂರು ತಿಂಗಳಿನಿಂದ ಬಹಿಷ್ಕಾರ ಹಾಕಿದ್ದು, ಗ್ರಾಮದಲ್ಲಿ ಯಾರೂ ಮಾತನಾಡಿಸುತ್ತಿಲ್ಲ. ಕೆಲಸಕ್ಕೆ ಕರೆಯುತ್ತಿಲ್ಲ ಎಂದು ಕುಟುಂಬದ ಮುಖ್ಯಸ್ಥೆ ರತ್ನಮ್ಮ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅಳಲು ತೋಡಿಕೊಂಡರು.
ಗ್ರಾಮದಲ್ಲಿ ಕಳೆದ ಏಪ್ರಿಲ್ 27ರಂದು ಆಯೋಜಿಸಿದ್ದ ಅಂಬೇಡ್ಕರ್ ಜಯಂತ್ಯುತ್ಸವ ವೇಳೆ ಮೆರವಣಿಗೆ ಸಾಗುತ್ತಿತ್ತು. ಅದರ ವಿರುದ್ಧ ಯಾರೋ ಹುಲ್ಲಹಳ್ಳಿ ಠಾಣೆಗೆ ದೂರವಾಣಿ ಕರೆ ಮಾಡಿ ದೂರು ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ವಾಹನದ ಚಾಲಕನನ್ನು ವಶಕ್ಕೆ ಪಡೆದರು. ಈ ರೀತಿ ದೂರು ನೀಡಿದವರು ನಾವೇ ಎಂಬ ಆರೋಪದ ಮೇಲೆ ತಮ್ಮ ವಿರುದ್ಧ ಬಹಿಷ್ಕಾರ ಹಾಕಲಾಗಿದೆ.
ಆದರೆ ವಾಸ್ತವವಾಗಿ ನಾವು ದೂರು ನೀಡಿಲ್ಲ. ಹೀಗಿದ್ದರೂ ನಮಗೆ ಬಹಿಷ್ಕಾರ ಹಾಕಲಾಗಿದೆ ಎಂದು ದೂರು ನೀಡಲು ಹೋದರೆ ಹುಲ್ಲಹಳ್ಳಿ ಠಾಣೆ ಇನ್ಸ್‌ಪೆಕ್ಟರ್ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಬೇಕಿದ್ದರೆ ಠಾಣೆಗೆ ಬಂದ ಕಾಲ್ ಲಿಸ್ಟ್ ತೆಗೆಸಿ ನೋಡಲಿ ಸತ್ಯಾಂಶ ತಿಳಿಯುತ್ತದೆ. ಈಗ ಇನ್ಸ್‌ಪೆಕ್ಟರ್ ನಮಗೆ ಕಿರುಕುಳ ನೀಡುತ್ತಿರುವವರೊಂದಿಗೆ ಶಾಮೀಲಾಗಿದ್ದು, ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಈ ಕಾರಣದಿಂದಾಗಿ ಹಾಗೂ ಜೀವನ ನಡೆಸುವುದೇ ಕಷ್ಟಕರವಾಗಿರುವುದರಿಂದಾಗಿ ಸಂಬಂಧಿಸಿದವರು ಕೂಡಲೇ ಬಹಿಷ್ಕಾರ ತೆರವಿಗೆ ಕ್ರಮ ಕೈಗೊಳ್ಳದಿದ್ದಲ್ಲಿ ಇಡೀ ಕುಟುಂಬ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಕುರಿತು ಶಾಸಕ ದರ್ಶನ್ ಧ್ರುವನಾರಾಯಣ್, ಜಿಲ್ಲಾಧಿಕಾರಿ, ಎಸ್‌ಪಿ, ತಹಸೀಲ್ದಾರ್, ಪಿಡಿಒ ಮೊದಲಾದವರಿಗೆಲ್ಲ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ಸಂಬಂಧಿಸಿದವರು ಈ ಬಗ್ಗೆ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕೆಂದು ಕೋರಿದರು.
ಕುಟುಂಬದ ಸದಸ್ಯರಾದ ನಾಗಮಣಿ, ಪುಟ್ಟಸಿದ್ದಮ್ಮ ಇದ್ದರು.