ಮಂಡ್ಯ: ಮೇಲ್ವರ್ಗದ ಕೆಲವರು ಪೌರಕಾರ್ಮಿಕರಾಗಿ ಆಯ್ಕೆಯಾಗಿದ್ದು ಸ್ವಚ್ಛತೆಯಲ್ಲಿ ತೊಡಗದೆ ಕೇವಲ ಕಚೇರಿ ಕೆಲಸಕ್ಕೆ ಮೀಸಲಿದ್ದಾರೆ. ಇವರನ್ನು ಸ್ವಚ್ಛತೆ ಕೆಲಸಕ್ಕೆ ಕಳುಹಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ಧರಣಿ ನಡೆಸಿದರು. ನಂತರ ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ಸ್ವಾಮಿಗೌಡ ಅವರಿಗೆ ಮನವಿ ಸಲ್ಲಿಸಿದರು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದೆ. ಅಮೃತ ಮಹೋತ್ಸವ ಆಚರಿಸುತ್ತಿದ್ದರೂ ಜಾತೀಯತೆ ಎಂಬ ಪಿಡುಗು ಮಾತ್ರ ಹೋಗಿಲ್ಲ. ಎಸ್ಸಿ, ಎಸ್ಟಿ ಸಮುದಾಯದವರು ಪೌರಕಾರ್ಮಿಕರಾಗಿ ನಗರ ಮತ್ತು ಪಟ್ಟಣಗಳನ್ನು ಸ್ವಚ್ಛಗೊಳಿಸಬೇಕು. ಅದೇ ಮೇಲ್ವರ್ಗದ ಪೌರಕಾರ್ಮಿಕರು ಜಾತಿ, ಹಣ ಬಲದಿಂದ ಸ್ವಚ್ಛತೆ ಕಾರ್ಯದಲ್ಲಿ ಒಂದು ದಿನವು ತೊಡಗದೆ ಇದ್ದಾರೆ ಎಂದು ಆರೋಪಿಸಿದರು.
ಈ ಸಂಬಂಧ ರಾಜ್ಯ ಸರ್ಕಾರ ಪೌರಕಾರ್ಮಿಕರನ್ನು ಮೂಲ ಕೆಲಸವಾದ ಸ್ವಚ್ಛತೆ ಕೆಲಸ ಬಿಟ್ಟು ಬೇರ‌್ಯಾವುದೇ ಕೆಲಸಗಳಿಗೆ ನಿಯೋಜನೆ ಮಾಡಬಾರದು ಎಂಬ ಆದೇಶವಿದ್ದರೂ 2018ರಿಂದ ಇಲ್ಲಿಯ ತನಕ ಜಿಲ್ಲಾಧಿಕಾರಿಗಳ ಕಚೇರಿ ಮತ್ತು ಮನೆಗಳಲ್ಲಿ ಕೆಲಸಗಳನ್ನು ಮಾಡಿಸಿಕೊಳ್ಳಲು ಮದ್ದೂರು ಪುರಸಭೆಯ ಸವರ್ಣೀಯ ಜನಾಂಗದ ಪೌರಕಾರ್ಮಿಕರೊಬ್ಬರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕ್ರಮವನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದು. ಸೆ.1ರಿಂದ ಮಂಡ್ಯ ನಗರಸಭೆಗೆ ಹೆಚ್ಚುವರಿಯಾಗಿ ಪೌರಕಾರ್ಮಿಕರ ಅವಶ್ಯಕತೆ ಇಲ್ಲದಿದ್ದರೂ ನಿಯೋಜನೆ ಮಾಡಲಾಗಿದೆ. ಕೆಳ ಸಮುದಾಯದ ಜನರಿಗೆ ಹುದ್ದೆಗನುಗುಣವಾಗಿ ಸಾಮಾಜಿಕ ನ್ಯಾಯ ಕೊಡಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದ್ದು, ಮೂಲ ಸ್ಥಾನಗಳಿಗೆ ಕೆಲವು ಪೌರಕಾರ್ಮಿಕರನ್ನು ಮರಳಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ಶ್ರೀನಿವಾಸ್, ತಿಮ್ಮೇಶ್, ಶಿವರಾಜ್ ಮರಳಿಗ, ಅಪ್ಪಾಜಿ ಹೊಸಗಾವಿ, ಗುರುಲಿಂಗಯ್ಯ, ಪುಟ್ಟಲಿಂಗಯ್ಯ, ಶಿವಕುಮಾರ್, ನಂದನ್‌ಕುಮಾರ್, ಹರೀಶ್ ಭಾಗವಹಿಸಿದ್ದರು.