ದಲಿತ ಸಂಘಟನೆಗಳಿಂದ ಒನಕೆ ಓಬವ್ವ ಜಯಂತಿ ಆಚರಣೆ

ದಲಿತ ಸಂಘಟನೆಗಳಿಂದ ಒನಕೆ ಓಬವ್ವ ಜಯಂತಿ ಆಚರಣೆ
Published on

ಹಾಸನ: ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ದಲಿತ ಸಂಘಟನೆಗಳಿಂದ ಸೋಮವಾರ ವೀರ ವನಿತೆ ಒನಕೆ ಓಬವ್ವ ಜಯಂತಿ ಆಚರಿಸಲಾಯಿತು.

ಜಿಲ್ಲಾಡಳಿತದಿಂದ ಇತ್ತೀಚೆಗೆ ಹಾಸನಾಂಬ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ಒನಕೆ ಓಬವ್ವ ಜಯಂತಿಯನ್ನು ಸಾರ್ವಜನಿಕರ ಕೊರತೆಯಿಂದ ರದ್ದುಪಡಿಸಲಾಗಿತ್ತು. ಆದ್ದರಿಂದ ದಲಿತಪರ ಸಂಘಟನೆಯ ಮುಖಂಡರೇ ಕಾರ್ಯಕ್ರಮ ಆಯೋಜಿಸಿದ್ದರು. ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ ನಂತರ ಓಬವ್ವ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವಿಸಲಾಯಿತು.

ದಲಿತ ಮುಖಂಡ ಕೆ.ಈರಪ್ಪ ಅವರು ಮಾತನಾಡಿ, ನ. 11 ರಂದು ಹಮ್ಮಿಕೊಂಡಿದ್ದ ಒನಕೆ ಓಬವ್ವ ಜಯಂತಿಯನ್ನು ಜಿಲ್ಲಾಡಳಿತ ಸಂಪೂರ್ಣ ಕಡೆಗಣಿಸಿತು. ಪೂರ್ವಭಾವಿ ಸಭೆಗೆ ಸಮುದಾಯದ ಮುಖಂಡರನ್ನು ಕರೆದಿದ್ದರೆ ಸಲಹೆ ನೀಡುತ್ತಿದ್ದೆವು. ಆದರೆ ಅಧಿಕಾರಿಗಳ ಸರ್ವಾಧಿಕಾರಿ ಧೋರಣೆ ಸ್ವಾತಂತ್ರೃ ಹೋರಾಟಗಾರ್ತಿಗೆ ಅವಮಾನ ಮಾಡಿದಂತಾಗಿದೆ. ಜಿಲ್ಲಾಡಳಿತದ ಈ ನಡೆಯನ್ನು ತೀವ್ರವಾಗಿ ಖಂಡಿಸುತ್ತೇವೆಂದರು.

ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರು ತಮಗೆ ತೋಚಿದಂತೆ ಕೆಲಸ ಮಾಡುತ್ತಿದ್ದಾರೆ. ಯಾರ ಮಾತನ್ನು ಕೇಳುವುದಿಲ್ಲ. ತಮಗೆ ಇಷ್ಟಬಂದ ಹಾಗೆ ವರ್ತಿಸುತ್ತಾರೆ. ಓಬವ್ವ ದಲಿತ ಮಹಿಳೆ ಎಂಬ ಕಾರಣಕ್ಕೆ ನಿರ್ಲಕ್ಷೃ ವಹಿಸಲಾಗಿದೆ. ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಬೇಕಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ತಾರಾನಾಥ್ ಅವರನ್ನು ಕೂಡಲೇ ಅಮಾನತು ಮಾಡಬೇಕೆಂದು ಒತ್ತಾಯಿಸಿದರು.

ದಲಿತ ಮುಂಖಡ ಪರ್ವತಯ್ಯ ಮಾತನಾಡಿ, ಒನಕೆ ಓಬವ್ವ ಅವರಿಗೆ ಜಿಲ್ಲಾಡಳಿತ ಅವಮಾನ ಮಾಡಿದ್ದರೂ ಸಮಾಜದ ಎಲ್ಲರೂ ಸೇರಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಖುಷಿ ತಂದಿದೆ. ಇದು ಸ್ವಾಭಿಮಾನದ ಜಯಂತಿಯಾಗಿದ್ದು, ಜಿಲ್ಲಾಡಳಿತ ಇನ್ನಾದರೂ ತಪ್ಪು ತಿದ್ದಿಕೊಳ್ಳಲಿ ಎಂದರು.

ದಲಿತ ಸಂಘಟನೆಗಳ ಒಕ್ಕೂಟದ ಗ್ಯಾರಂಟಿ ರಾಮಣ್ಣ, ಕೃಷ್ಣ ದಾಸ್, ಶಿವಮ್ಮ, ಕುಮಾರಸ್ವಾಮಿ, ಆರಾಧನ, ಮಲ್ಲೇಶ್ ಅಂಬುಗ, ಮಲ್ಲಿಗೆವಾಳು ದ್ಯಾವಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net