ದಲಿತ ಸಂಘಟನೆಗಳ ಮುಖಂಡರಿಂದ ಪ್ರತಿಭಟನೆ

9ark-1
ಅರಕಲಗೂಡು ತಾಲೂಕಿನ ಬಿದರೂರು ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಸಗಣಿ ಎರಚಿ ಅವಮಾನಿಸಲಾಗಿದೆ ಎಂದು ಆರೋಪಿಸಿ ದಲಿತ ಸಂಘಟನೆಗಳ ಮುಖಂಡರು ಶನಿವಾರ ನಡೆಸಿದ ಪ್ರತಿಭಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಸಮಸ್ಯೆ ಆಲಿಸಿದರು.
Published on

ಅರಕಲಗೂಡು: ತಾಲೂಕಿನ ಬಿದರೂರು ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಸಗಣಿ ಎರಚಿ ಅವಮಾನಿಸಲಾಗಿದೆ ಎಂದು ಆರೋಪಿಸಿ ದಲಿತ ಸಂಘಟನೆಗಳ ಮುಖಂಡರು ಶನಿವಾರ ಪ್ರತಿಭಟನೆ ನಡೆಸಿದರು.

ಬಿಎಸ್ಪಿ ಮುಖಂಡ ಅತ್ನಿ ಹರೀಶ್ ಮಾತನಾಡಿ, ಗ್ರಾಮದ ಬಸ್ ತಂಗುದಾಣ ಬಳಿ ಅಂಬೇಡ್ಕರ್ ಭಾವಚಿತ್ರಕ್ಕೆ ಕಿಡಿಗೇಡಿಗಳು ಸಗಣಿ ಬಳಿದು ಅಪಮಾನ ಮಾಡಿರುವುದು ಖಂಡನೀಯ. ಊರಿನಲ್ಲಿ ಎರಡು ದಿನಗಳ ಹಿಂದೆ ಗ್ರಾಮದೇವತೆ ಶ್ರೀ ಬಸವೇಶ್ವರ ದೇವಸ್ಥಾನದ ಜಾತ್ರೆ ನಡೆದಿತ್ತು. ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ತೆರಳಿದ್ದ ದಲಿತರಿಗೆ ಊರಿನ ಸವರ್ಣೀಯರು ಅವಕಾಶ ನೀಡದೆ ಅಸ್ಪಶ್ಯತೆ ನೀತಿ ಅನುಸರಿಸಿದ್ದಾರೆ. ಗ್ರಾಮದ ದಲಿತರು ದೇವಸ್ಥಾನಕ್ಕೆ ಪ್ರವೇಶ ನೀಡದಿರುವುದು ಸರಿಯಲ್ಲ. ಇದೇ ದ್ವೇಷದಿಂದ ಕಿಡಿಗೇಡಿಗಳು ಈಗ ಅಂಬೇಡ್ಕರ್ ಭಾವಚಿತ್ರಕ್ಕೆ ಸಗಣಿ ಬಳಿದು ಹೀನಕೃತ್ಯ ಎಸಗಿದ್ದಾರೆ. ಪೊಲೀಸರು ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಕೊಣನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಮನವಿ ಆಲಿಸಿದರು. ಈ ಕುರಿತು ಪರಿಶೀಲಿಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net