

ಮೈಸೂರು: ಬೌದ್ಧ ವಿಹಾರಗಳಲ್ಲಿ ಇಂಗ್ಲಿಷ್ ಕಲಿಕೆ ಮತ್ತು ಡಾ.ಅಂಬೇಡ್ಕರ್ ಕುರಿತು ಓದು, ಅಧ್ಯಯನ ನಡೆಯಬೇಕು. ಬೌದ್ಧ ಧರ್ಮವೂ ಪಾಳಿ, ಪ್ರಾಕೃತ ಬದಲು ಇಂಗ್ಲಿಷ್‌ನಲ್ಲೇ ಧಾರ್ಮಿಕ ಆಚರಣೆ ಹಾಗೂ ತತ್ವಗಳನ್ನು ಪ್ರಚಾರ ಮಾಡಬೇಕು ಎಂದು ತೆಲಂಗಾಣದ ಚಿಂತಕ ಕಾಂಚಾ ಐಲಯ್ಯ ಸಲಹೆ ನೀಡಿದರು.
ಬೌದ್ಧ ಮಹಾ ಸಮ್ಮೇಳನದ ವಿಚಾರ ಗೋಷ್ಠಿಯಲ್ಲಿ ‘ಬುದ್ಧ ಮತ್ತು ಮಾನವ ಪ್ರೇಮ’ ಕುರಿತು ಮಾತನಾಡಿದರು. ಆಂಗ್ಲ ಮಾಧ್ಯಮದಲ್ಲೇ ಮಕ್ಕಳಿಗೆ ಶಿಕ್ಷಣ ಕೊಡಿಸಿದಾಗ ಮಾತ್ರವೇ ಹಿಂದು ಶ್ರೇಣಿಕೃತ ಸಾಮಾಜಿಕ ವ್ಯವಸ್ಥೆಯಿಂದ ದಲಿತರು, ಶೂದ್ರರರು ವಿಮೋಚನೆ ಪಡೆಯಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.
ಗಿರೀಶ್ ಕಾರ್ನಾಡ್, ಯು.ಆರ್.ಅನಂತಮೂರ್ತಿ ಅವರು ಕನ್ನಡ ಭಾಷೆಯ ಉಳಿವಿಗೆ ಎಲ್ಲ ಮಕ್ಕಳು ಮಾತೃಭಾಷೆಯಲ್ಲೇ ಓದಬೇಕೆಂದು ಹೇಳಿದ್ದರು. ಅವರ ಎದುರೇ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದೆ. ಸೇವಕರಾಗಿ ಇರಿಸುವ ಹುನ್ನಾರ ಎಂದು ಹೇಳಿದ್ದೆ. ಇದನ್ನು ಅರಿತಿದ್ದ ಡಾ.ಅಂಬೇಡ್ಕರ್ ಬರೆದಿದ್ದೆಲ್ಲವೂ ಇರುವುದು ಇಂಗ್ಲಿಷ್‌ನಲ್ಲೇ ಎಂದರು.
ಬೌದ್ಧ ಧರ್ಮ ಭಾರತದಲ್ಲಿ ಇದ್ದಿದ್ದರೆ, ಆರ್‌ಎಸ್‌ಎಸ್, ಬಿಜೆಪಿ ಅಧಿಕಾರಕ್ಕೆ ಬರುತ್ತಿರಲಿಲ್ಲ. ಶೂದ್ರರು, ಶೋಷಿತರು ಬಡವರಾಗಿ ಇರುತ್ತಿರಲಿಲ್ಲ.
ಬುದ್ಧ ಧಮ್ಮ ಕಾರಣಕ್ಕೆ ಚೀನಾ, ಜಪಾನ್, ಕೊರಿಯಾ ಮುಂದುವರಿದಿವೆ. ‘ಹಿಂದುವಾಗಿ ಹುಟ್ಟಿದ್ದೇನೆ, ಹಿಂದುವಾಗಿ ಸಾಯಲಾರೆ’ ಎಂದು ಹೇಳಿ ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸಿದ್ದು ಏಕೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ನಿಜವಾದ ಬೌದ್ಧ. ತಮ್ಮತ್ತ ಶೂ ತೂರಿದವನ ಬಗ್ಗೆ ಕೋಪಗೊಳ್ಳದೇ ಕ್ಷಮಿಸಿದರು. ಇದಲ್ಲವೇ ಬುದ್ಧ ಮಾರ್ಗ ಎಂದು ಹೇಳಿದರು.
140 ವರ್ಷದ ಕಾಂಗ್ರೆಸ್ ಇತಿಹಾಸದಲ್ಲಿ ಮಲ್ಲಿಕಾರ್ಜುನ ಖರ್ಗೆ ದಲಿತ ಸಮುದಾಯದ 2ನೇ ಅಧ್ಯಕ್ಷರು. ಅವರ ಇಂಗ್ಲಿಷ್ ಮತ್ತು ಹಿಂದಿ ಭಾಷೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರಿಗಿಂತಲೂ ಸುಂದರವಾಗಿದೆ. ರಾಜ್ಯಸಭೆಯಲ್ಲಿ ಒಂದು ಮಾತಿನಿಂದಲೇ ಎಲ್ಲರನ್ನು ನಡುಗಿಸುವ ಶಕ್ತಿ ಇದೆ ಎಂದರು.
ವಿದ್ವಾಂಸ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಮಾತನಾಡಿ, ಬೌದ್ಧ ಧರ್ಮ ತನ್ನ ಶಕ್ತಿಯಿಂದಲೇ ನಿಂತಿದೆ. ಅದರಿಂದಲೇ ಅದು ಬೆಳೆಯುತ್ತಿದೆ. 37 ದೇಶಗಳಲ್ಲಿ ಬಹುಸಂಖ್ಯಾತರ ಧರ್ಮವಾಗಿದೆ. ವಿಶ್ವ ಧರ್ಮವಾಗಿ ಹೊರಹೊಮ್ಮಿದೆ ಎಂದರು.
ನೈತಿಕತೆ, ವೈಜ್ಞಾನಿಕತೆ, ಪ್ರಶ್ನಿಸುವಿಕೆಯೇ ಈ ಧರ್ಮ ಜೀವಾಳ. ಬುದ್ಧ ಎಂದೂ ನಾನು ದೇವರು, ಜನರನ್ನು ಕಾಪಾಡುತ್ತೇನೆಂದು ಹೇಳಿಲ್ಲ. ಹೇಗೆ ಬದುಕಬೇಕು ಎಂಬದರ ಕುರಿತು ಬೋಧಿಸಿದ್ದಾನೆ. ಹಿಂದು ಧರ್ಮದಲ್ಲಿ ಮೌಢ್ಯ, ಮೂಢನಂಬಿಕೆ, ಕಂದಾಚಾರಗಳ ಆಚರಣೆ ಹೆಚ್ಚು. ಇದು ಬುದ್ಧ ಧರ್ಮದಲ್ಲಿಲ್ಲ ಎಂದು ಹೇಳಿದರು.
ಹಣೆಬರಹ, ವಿಧಿಗಳು, ಕರ್ಮಸಿದ್ಧಾಂತ, ಪುನರ್ಜನ್ಮವನ್ನು ಬುದ್ಧ ಧರ್ಮವು ನಿರಾಕರಿಸುತ್ತದೆ. ಸಮಾನತೆ, ಭಾತೃತ್ವಯೇ ಇದರ ದೊಡ್ಡ ಕೊಡುಗೆ.
ಹಿಂದು ಧರ್ಮದಲ್ಲಿ ಇದಿಲ್ಲ. ಧ್ವೇಷ, ಅಸಹಿಷ್ಣತೆ ಬಿತ್ತುತ್ತಿರುವ ಈ ಕಾಲದಲ್ಲಿ ಶಾಂತಿ ಪಠಣ ಮಾಡುವ ಬುದ್ಧ ಧಮ್ಮ ಕಡೆಗೆ ಸಾಗುವ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಿಸಬೇಕಿದೆ ಎಂದರು. ನಿವೃತ್ತ ಐಪಿಎಸ್ ಮರಿಸ್ವಾಮಿ, ಎಚ್.ಡಿ.ಕೋಟೆಯ ಅಂತರಸಂತೆಯ ಭಂತೆ ಮಾತೆ ಗೌತಮಿ ಇತರರು ಇದ್ದರು.