

ಚಿತ್ರದುರ್ಗ: ರಾಜ್ಯದಲ್ಲಿ 5 ವರ್ಷ ಮುಖ್ಯಮಂತ್ರಿಯಾಗಿ ಮತ್ತೊಮ್ಮೆ ಅಧಿಕಾರಾವಧಿಯನ್ನು ಅಹಿಂದ ಸಮುದಾಯಗಳ ಕಣ್ಮಣಿ ಸಿದ್ದರಾಮಯ್ಯ ಅವರು ಪೂರೈಸಬೇಕು. ಇದಕ್ಕೆ ಇಡೀ ದಲಿತ ಸಮುದಾಯ ಬೆನ್ನೆಲುಬಾಗಿ ನಿಂತಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ರಾಜ್ಯ ಸರ್ಕಾರದಿಂದ ಬೆಂಗಳೂರಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಡಾ.ಬಾಬು ಜಗಜೀವನರಾಮ್ ಭವನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಿದ್ದರಾಮಯ್ಯ 2ನೇ ಬಾರಿ ಸಿಎಂ ಆಗಿ ಉತ್ತಮ ಆಡಳಿತಕ್ಕೆ ಮುಂದಾಗಿರುವುದನ್ನು ಸಹಿಸಿಕೊಳ್ಳಲು ಕೆಲವರಿಗೆ ಆಗುತ್ತಿಲ್ಲ. ಹೀಗಾಗಿ ಅನಗತ್ಯ ಟೀಕೆಗಳ ಮೂಲಕ ಎದೆಗುಂದಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಆಸ್ಪದ ನೀಡದೆ, ನಿರ್ಭಯವಾಗಿ ಕಾರ್ಯನಿರ್ವಹಿಸಿ ಎಂದರು.
ಸಿದ್ದರಾಮಯ್ಯ ಎಲ್ಲ ವರ್ಗದ ಜನರು ಮೆಚ್ಚಿಕೊಳ್ಳುವ ರೀತಿ ಮಾದರಿ ಆಡಳಿತ ನಡೆಸುತ್ತಿದ್ದಾರೆ. ಅಲ್ಲದೆ, ಶೋಷಿತ, ಬಡ, ನೊಂದ ಅಹಿಂದ ವರ್ಗದ ಪ್ರಗತಿಗೆ ಯೋಜನೆಗಳನ್ನು ರೂಪಿಸಿರುವ ಕಾರಣಕ್ಕೆ ಅವರ ಕುರಿತು ಕೆಲವರಲ್ಲಿ ಸಹಜವಾಗಿ ಅಸೂಯೆ ಉಂಟಾಗಿದೆ. ಆದ್ದರಿಂದ ಸುಳ್ಳು ಆರೋಪಗಳಲ್ಲಿ ಕೆಲವರು ನಿರತರಾಗಿದ್ದಾರೆ ಎಂದು ದೂರಿದರು.
ಈ ಹಿಂದೆ 5 ವರ್ಷ ನನ್ನನ್ನು ಸಮಾಜ ಕಲ್ಯಾಣ ಸಚಿವರಾಗಿ ಸ್ವತಂತ್ರವಾಗಿ ಕಾರ್ಯನಿರ್ಹಿಸಲು ಸಿದ್ದರಾಮಯ್ಯ ಅವರು ಅವಕಾಶ ಕೊಟ್ಟಿದ್ದರು. ಆ ವೇಳೆ ವಸತಿನಿಲಯಗಳ ನಿರ್ಮಾಣ ಸೇರಿ ನೂರಾರು ಜನಪರ ಕೆಲಸ ಮಾಡಿದ್ದೇನೆ. ವಿಶೇಷವಾಗಿ ಡಾ.ಬಾಬು ಜಗಜೀವನರಾಮ್ ಭವನ ಇಡೀ ದೇಶವೇ ತಿರುಗಿ ನೋಡುವ ರೀತಿ ನಿರ್ಮಿಸಲು ಶ್ರಮಿಸಿದ್ದೇನೆ. ಅದಕ್ಕೆ ಈಗಿನ ಸಿಎಂ ಕಾರಣ ಎಂದರು.
ಇದೇ ವೇಳೆ ರಾಜ್ಯ ಸರ್ಕಾರದಿಂದ ಸಿಎಂ ಸಿದ್ದರಾಮಯ್ಯ ಆಂಜನೇಯ ಅವರನ್ನು ಸನ್ಮಾನಿಸಿದರು. ರಾಜ್ಯದ ವಿವಿಧ ದಲಿತ ಸಂಘಟನೆಗಳ ಮುಖಂಡರು ಬೆಳ್ಳಿ ಗಧೆ ನೀಡಿ ಗೌರವಿಸಿದರು.
ಲೋಕಸಭಾ ಮಾಜಿ ಸಭಾಧ್ಯಕ್ಷೆ ಮೀರಾಕುಮಾರಿ, ಸಚಿವರಾದ ಎಚ್.ಸಿ.ಮಹಾದೇವಪ್ಪ, ಕೆ.ಎಚ್.ಮುನಿಯಪ್ಪ ಇತರರಿದ್ದರು.