ದಲಿತ ಮುಖಂಡರಿಂದ ಸಭೆ ಬಹಿಷ್ಕಾರ

18ark3
ಅರಕಲಗೂಡಿನಲ್ಲಿ ಶುಕ್ರವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಹಿತರಕ್ಷಣಾ ಸಮಿತಿ ಸಭೆಯಲ್ಲಿ ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ ಮಾತನಾಡಿದರು. ದೇವರಾಜು, ಗಿರಿಧರ್, ರವಿಕುಮಾರ್ ಇದ್ದರು.
Published on

ಅರಕಲಗೂಡು: ತಾಲೂಕು ಮಟ್ಟದ ಪರಿಶಿಷ್ಟ ಜಾತಿ, ವರ್ಗಗಳ ಜಾಗೃತಿ ಮತ್ತು ಹಿತರಕ್ಷಣಾ ಸಮಿತಿ ಸಭೆ ಕೇವಲ ಮಾಹಿತಿ ಸಂಗ್ರಹಕ್ಕಾಗಿ ನಡೆಯುತ್ತಿದೆಯೇ ಹೊರತು ದಲಿತರ ಹಿತರಕ್ಷಣೆಗೆ ಅಲ್ಲ. ಅಧಿಕಾರಿಗಳು ದಲಿತರ ಕಲ್ಯಾಣ ಕಾರ್ಯಕ್ರಮಗಳನ್ನು ಕೇವಲ ಕಾಟಾಚಾರಕ್ಕಾಗಿ ಮಾಹಿತಿ ದಾಖಲಿಸುತಿದ್ದಾರೆ. ಎಲ್ಲ ಇಲಾಖೆಗಳ ಅನುಪಾಲನ ವರದಿಯೊಂದಿಗೆ ಸಭೆ ನಡೆಸುವಂತೆ ಸಮುದಾಯದ ಮುಖಂಡರು ಏರುಧ್ವನಿಯಲ್ಲಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


ಪಟ್ಟಣದ ಶಿಕ್ಷಕರ ಭವನದಲ್ಲಿ ಶುಕ್ರವಾರ ತಹಸೀಲ್ದಾರ್ ಬಸವರೆಡ್ಡಪ್ಪ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ದಲಿತರ ಜಾಗೃತಿ ಮತ್ತು ಹಿತರಕ್ಷಣಾ ಸಮಿತಿ ಸಭೆಯಲ್ಲಿ ಮುಖಂಡರಾದ ಬಿ.ಸಿ.ರಾಜೇಶ್, ಛಲವಾದಿ ಮಹಾಸಭ ಉಪಾಧ್ಯಕ್ಷ ನಿಂಗರಾಜು, ಗಣೇಶವೇಲಾಪುರಿ, ಪ್ರಸನ್ನಕುಮಾರ್ ಇತರರು ಮಾತನಾಡಿದರು.
ಪ್ರತಿ ಮೂರು ತಿಂಗಳಿಗೊಮ್ಮೆ ದಲಿತರ ಹಿತರಕ್ಷಣಾ ಸಮಿತಿ ಸಭೆಯನ್ನು ಆಯೋಜಿಸಿ ಇಲಾಖೆವಾರು ದಲಿತ ಸಮುದಾಯಕ್ಕೆ ಸಿಗುತ್ತಿರುವ ಸವಲತ್ತುಗಳ ಬಳಕೆ ಮತ್ತು ಅನುಷ್ಠಾನ ವರದಿಯನ್ನು ಮಂಡಿಸಬೇಕಿದೆ. ಇದರಿಂದ ಸವಲತ್ತುಗಳ ಬಳಕೆ, ದುರುಪಯೋಗ ಹಾಗೂ ಅಧಿಕಾರಿಗಳ ಕಾರ್ಯದಕ್ಷತೆ, ಲೋಪ ಕುರಿತು ಸಭೆಯಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಹೇಳಿದರು.


ಅಲ್ಲದೇ ಪೊಲೀಸ್ ಇಲಾಖೆಯಿಂದ ಕಾನೂನಾತ್ಮಕ ರಕ್ಷಣೆ, ಜಾತಿ ನಿಂದನೆ ಪ್ರಕರಣ ಕುರಿತು ಪರಿಹಾರ ಕಂಡುಕೊಳ್ಳಬಹುದಾಗಿದೆ. ಈ ಯಾವುದೇ ಪ್ರಯೋಜನ ಸಮಿತಿ ಸಭೆಯಿಂದ ಆಗುತ್ತಿಲ್ಲ. ಎಲ್ಲ ಇಲಾಖೆ ಅಧಿಕಾರಿಗಳ ಹಾಜರಾತಿ ಹಾಗೂ ಅನುಪಾಲನ ವರದಿಯೊಂದಿಗೆ ಸಭೆ ನಡೆಸಬೇಕು ಎಂದು ಆಗ್ರಹಿಸಿ ಸಭೆಯಿಂದ ಹೊರ ನಡೆದರಲ್ಲದೆ ಅಧಿಕಾರಿಗಳು ದಲಿತ ವಿರೋಧಿ ಎಂದು ಆರೋಪಿಸಿ ಕೆಲ ಕಾಲ ಪ್ರತಿಭಟನೆ ನಡೆಸಿದರು.


ಸಮಿತಿ ಅಧ್ಯಕ್ಷರೂ ಆದ ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ್ ಮಾತನಾಡಿ, ಹಿಂದಿನ ಸಭೆಯ ನಡಾವಳಿಯನ್ನು ಸಭೆಯಲ್ಲಿ ಓದಲಾಗಿದೆ. ಕೈಗೊಂಡಿರುವ ಪರಿಹಾರ ಕ್ರಮಗಳನ್ನು ಮಂಡಿಸಲಾಗಿದೆ. ಮತ್ತೆ ಏನೇ ಸಮಸ್ಯೆ ಇದ್ದರೂ ಇಂದಿನ ಸಭೆಯಲ್ಲಿ ಮಂಡಿಸಿ, ಸಭೆಯನ್ನು ಬಹಿಷ್ಕಾರ ಮಾಡುವುದರಿಂದ ಪರಿಹಾರ ದೊರೆಯುವುದಿಲ್ಲ. ಸಹಕರಿಸಿ ಎಂದು ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ.


ಒಂದೂವರೆ ವರ್ಷದಲ್ಲಿ ಪರಿಶಿಷ್ಟರ ಹಿತರಕ್ಷಣಾ ಸಮಿತಿ ಸಭೆಯನ್ನು ಕರೆದಿಲ್ಲ. ಸಮಸ್ಯೆಗಳು ನೂರಾರು ಇವೆ. ನಿತ್ಯವೂ ಮೇಲ್ವರ್ಗದವರಿಂದ ದೌರ್ಜನ್ಯ ಪ್ರಕರಣಗಳು ಮರುಕಳಿಸುತ್ತಿವೆ. ದಲಿತರು ದೂರು ಕೊಟ್ಟರೆ, ಪೊಲೀಸ್ ಇಲಾಖೆಯವರಿಂದ ಪ್ರತಿದೂರು ದಾಖಲಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹಿರಿಯ ವಕೀಲ ರಾಜೇಶ್ ಹೇಳಿದರು.


20 ಇಲಾಖೆಗಳಿಂದ ದಲಿತರ ಅಭಿವೃದ್ಧಿಗೆ ಹತ್ತಾರು ಯೋಜನೆಗಳು ಇವೆ. ಕಳೆದ ಬಾರಿಯ ಸಭೆಯಲ್ಲಿ ಮಂಡಿಸಿದ ಸಮಸ್ಯೆಗೆ ಸೂಕ್ತ ಪರಿಹಾರ ಸಿಕ್ಕಿಲ್ಲ. ಇಂದಿನ ಸಭೆಯಲ್ಲಿಯೂ ಅದೇ ಮುಂದುವರಿಯಲಿದೆ. ಮುಂದೆ ಸೂಕ್ತ ಕ್ರಮ ಕೈಗೊಂಡಿರುವ ವರದಿಯೊಂದಿಗೆ ಸಭೆ ನಡೆಯಲಿ. ಹೀಗಾಗಿ ಬಹಿಷ್ಕಾರ ಮಾಡುತ್ತಿದ್ದೇವೆ. ಮುಂದಿನ ಸಭೆಯನ್ನು ನಡೆಸುವಾಗ ಎಲ್ಲ ಕ್ರಮಗಳನ್ನು ಅನುಸರಿಸಲಿ ಎಂದು ಆಗ್ರಹಿಸಿದರು.


ದಲಿತ ಮುಖಂಡ ಗಣೇಶ್ ವೇಲಾಪುರಿ ಮಾತನಾಡಿ, ಸಭೆಗೆ ಬಹುತೇಕ ಇಲಾಖೆ ಅಧಿಕಾರಿಗಳು ಬಂದಿಲ್ಲ. ಪ್ರಮುಖವಾಗಿ ಪೊಲೀಸ್ ಇಲಾಖೆ, ಸೆಸ್ಕ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿ ಸೇರಿದಂತೆ ಹಲವು ಇಲಾಖೆ ಅಧಿಕಾರಿಗಳು ಗೈರಾಗಿದ್ದಾರೆ. ಈ ಇಲಾಖೆಯ ವಿಚಾರ ಚರ್ಚೆ ಮಾಡುವ ವೇಳೆ ಸಮಂಜಸ ಉತ್ತರ ನೀಡುವವರಿಲ್ಲ. ಹೀಗಾಗಿ, ಎಲ್ಲ ಇಲಾಖೆಯ ಅಧಿಕಾರಿಗಳು ದಲಿತರ ಹಿತರಕ್ಷಣೆಗೆ ಕೈಗೊಂಡಿರುವ ಕ್ರಮ ಮತ್ತು ಇಲಾಖೆಯಿಂದ ಕಲ್ಪಿಸಿರುವ ಸವಲತ್ತುಗಳ ಬಗ್ಗೆ ನಿಖರವಾದ ಮಾಹಿತಿಯೊಂದಿಗೆ ಸಭೆಗೆ ಬರಲಿ ಎಂದು ಒತ್ತಾಯಿಸಿದರು.


ಮುಂದಿನ ಸಭೆಯ ದಿನಾಂಕವನ್ನು ಸದ್ಯದಲ್ಲಿಯೇ ತಿಳಿಸಲಾಗುವುದು. ಎಲ್ಲ ಇಲಾಖೆ ಅಧಿಕಾರಿಗಳೂ ಅಂದಿನ ಸಭೆಯಲ್ಲಿ ಹಾಜರಿದ್ದು, ಇಲಾಖೆಗೆ ಸಂಬಂಧಿಸಿದ ಮಾಹಿತಿಯನ್ನು ಸಭೆ ಮುಂದೆ ಇಡಬೇಕು. ಇಲ್ಲವಾದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ ಎಚ್ಚರಿಕೆ ನೀಡಿದರು.


ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಿರಿಧರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ಬಿಇಒ ದೇವರಾಜ್, ಕೊಣನೂರು ಠಾಣೆ ಪಿಎಸ್‌ಐ ಶೋಭಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net