

ಕಿಕ್ಕೇರಿ: ಪ್ರಭಾವಿ ರಾಜಕಾರಣಿಗಳ ಕೈವಾಡ ಹಾಗೂ ಕಂದಾಯ ಕೆಲ ಅಧಿಕಾರಿಗಳು ದಲಿತ ಯೋಧ ಕುಟುಂಬಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಕರ್ನಾಟಕ ದಲಿತ ಸಂಘಟನೆ ಹಾಗೂ ವಿವಿಧ ಸಂಘಟನೆಗಳು ಗುರುವಾರ ಪ್ರತಿಭಟನೆ ನಡೆಸಿದರು.
ಸಮೀಪದ ಮಗನಹೊಸಹಳ್ಳಿ ಗ್ರಾಮದಲ್ಲಿನ ದಲಿತ ಬೋರಯ್ಯನಿಗೆ ಅನ್ಯಾಯವಾಗಿದೆ ಎಂದು ಸಂಘಟನೆಯವರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಕಾರ್ಯದರ್ಶಿ ನಾಗಮಂಗಲ ದೇವರಾಜು ಮಾತನಾಡಿ, ಕಿಕ್ಕೇರಿ ಹೋಬಳಿಯ ಕಳ್ಳನಕೆರೆ ಗ್ರಾಮದ ದಲಿತ ಬಡ ರೈತ ಬೋರಯ್ಯ ಎಂಬುವರು ಸುಮಾರು 40-50 ವರ್ಷಗಳಿಂದ ಮಗನಹೊಸಹಳ್ಳಿ ಸರ್ವೇ ನಂ. 27ರಲ್ಲಿ 4 ಎಕರೆಯಷ್ಟು ಜಮೀನನಲ್ಲಿ ಕೃಷಿ ಚಟುವಟಿಕೆಯಲ್ಲಿದ್ದಾರೆ. ಜಮೀನು ಮಂಜೂರಾತಿಗಾಗಿ 17/02/1988 ರಿಂದಲೂ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ನಮೂನೆ 50, 53, 57ರ ಅರ್ಜಿ ಮೂಲಕ ಮನವಿ ಸಲ್ಲಿಸಿದ್ದಾರೆ.
ಅದರೆ ಯಾವುದನ್ನು ಪರಿಶೀಲಿಸದೆ ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲೂಕು, ಶ್ರವಣಬೆಳಗೊಳ ಹೋಬಳಿ, ಡಿಂಕ ಗ್ರಾಮದ ದೇವಮ್ಮ ಬಿನ್ ನಂಜೇಗೌಡ ಅವರಿಗೆ ಮಂಜೂರು ಮಾಡಲಾಗಿದೆ. ಬೋರಯ್ಯ ಅವರ ಪುತ್ರ ನಾಗರಾಜು ಭಾರತೀಯ ಸೇನೆಯಲ್ಲಿ ಇಂಫಾಲ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದು, ದೇಶ ಸೇವೆ ಮಾಡುತ್ತಿರುವ ಯೋಧನ ಕುಟುಂಬಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಹೀಗಾಗಿ ಕಂದಾಯ ಅಧಿಕಾರಿಗಳು ಅಕ್ರಮವಾಗಿ ಮಾಡಿರುವ ಖಾತೆಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿ ಕಂದಾಯ ಇಲಾಖೆ ಉಪತಹಸೀಲ್ದಾರ್ ಗೌರಮ್ಮ ಅವರಿಗೆ ಮನವಿ ಸಲ್ಲಿಸಿದರು.
ಛಲವಾದಿ ಮಹಾಸಭಾ ಅಧ್ಯಕ್ಷ ಹುಚನಹಳ್ಳಿ ನಟರಾಜು, ಮಾಂಬಳ್ಳಿ ಜಯರಾಮ್, ದಲಿತ ಸಂಘಟನೆ ಶಿವಮೊಗ್ಗ ಚಂದ್ರಪ್ಪ, ಲಕ್ಷ್ಮೀಪುರ ರಂಗಸ್ವಾಮಿ, ಚೌಡೇನಹಳ್ಳಿ ದೇವರಾಜು, ಗಿರೀಶ್, ಜಯರಾಂ, ಕತ್ತರಘಟ್ಟ ರಾಜೇಶ್ ಮತ್ತಿತರರಿದ್ದರು.