ದಲಿತ ಜಾತಿಯಲ್ಲ, ಶೋಷಿತ ವರ್ಗ

Boudde Sanman
Published on

ಬೀದರ್: ದಲಿತ ಎನ್ನುವುದು ಜಾತಿಯಲ್ಲ. ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಶೋಷಣೆಗೆ ಒಳಗಾದ ಒಂದು ಸಮುದಾಯವಾಗಿದೆ ಎಂದು ಹಿರಿಯ ದಲಿತ ಮುಖಂಡ ಮಾರುತಿ ಬೌದ್ಧೆ ಹೇಳಿದರು.

ಜಿಲ್ಲಾ ಮತ್ತು ತಾಲೂಕು ಕಸಾಪದಿಂದ ಮಂಗಳವಾರ ನಗರದಲ್ಲಿ ಏರ್ಪಡಿಸಿದ 33ನೇ ಮನೆಯಂಗಳದಲ್ಲಿ ಮಾತು ಸಂವಾದದಲ್ಲಿ ತಮ್ಮ ಹೋರಾಟದ ಅನುಭವ ಹಂಚಿಕೊಂಡ ಅವರು, ತಳ ಸಮುದಾಯದಲ್ಲಿ ಜನಿಸಿರುವ ಕಾರಣ ಬಾಲ್ಯದಲ್ಲಿ ಸಾಕಷ್ಟು ಸಂಕಷ್ಟಗಳನ್ನು ಅನುಭವಿಸಿರುವೆ. ಅಂಬೇಡ್ಕರ್ ತತ್ವಗಳಾದ ಶಿಕ್ಷಣ, ಸಂಘಟನೆ ಮತ್ತು ಹೋರಾಟಕ್ಕೆ ಬದ್ಧನಾಗಿ ಜೀವನ ಸಾಗಿಸಿ ಯಶಸ್ಸು ಕಂಡುಕೊಂಡೆ ಎಂದರು.

ಕಲಬುರಗಿಯ ಹಿರಿಯ ಸಾಹಿತಿ ಡಾ. ಕೆ.ಎಸ್.ಬಂಧು ಸಿದ್ದೇಶ್ವರ ಉದ್ಘಾಟಿಸಿ ಮಾತನಾಡಿ, ನಮ್ಮ ಹಕ್ಕುಗಳನ್ನು ಬೇಡುವುದಲ್ಲ, ಪಡೆದುಕೊಳ್ಳಬೇಕು. ಬೇರೆ ಪ್ರದೇಶಕ್ಕೆ ಹೋಲಿಸಿದರೆ ಬೀದರ್ ನೆಲವು ಸೌಹಾರ್ದತೆಗೆ ಹೆಸರಾಗಿದೆ. ಅದಕ್ಕೆ ಬಸವಾದಿ ಶರಣರ ಸರ್ವ ಸಮಾನತೆ, ಮಾನವೀಯ ಸಂವೇದನೆಗಳು ಸ್ಫೂರ್ತಿ ಎಂದು ಅಭಿಪ್ರಾಯಪಟ್ಟರು.

ಕಸಾಪ ಜಿಲ್ಲಾ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ, ಸಾಧಕರ ಮನದಾಳದ ಸಂವೇದನೆಗಳ ಅಭಿವ್ಯಕ್ತಿಗಾಗಿ, ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿರುವ ಸಾಧಕರನ್ನು ಸಮಾಜಕ್ಕೆ ಪರಿಚಯಿಸಲು ಮನೆಯಂಗಳದಲ್ಲಿ ಮಾತು ಕಾರ್ಯಕ್ರಮ ಆಯೋಜಿಸಲಾಗಿದೆ. ಪರಿಷತ್ ಸಾಮಾಜಿಕ ನ್ಯಾಯದ ಪರ ನಿಂತು ಕೆಲಸ ಮಾಡುತ್ತಿದೆ. ಬರುವ ದಿನಗಳಲ್ಲಿ ದಾಸ ಹಾಗೂ ದಲಿತ ಸಾಹಿತ್ಯ ಸಮ್ಮೇಳನ ನಡೆಸಲಾಗುತ್ತದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕು ಅಧ್ಯಕ್ಷ ಎಂ.ಎಸ್. ಮನೋಹರ ಮಾತನಾಡಿ, ಈ ನೆಲದಲ್ಲಿ ಸೌಹಾರ್ದತೆಯು ನೆಲೆಗೊಳ್ಳಲು ಅನೇಕ ದಲಿತರು ಹೋರಾಡಿದ್ದಾರೆ. ಆದರೆ ಚರಿತ್ರೆಯಲ್ಲಿ ಎಲ್ಲೂ ದಾಖಲಾಗಿಲ್ಲ. ಒಗ್ಗಟ್ಟಿನಿಂದ ದಲಿತ ಚಳವಳಿ ಮುಂದುವರೆಸಿಕೊಂಡು ಹೋಗಬೇಕಾಗಿದೆ ಎಂದರು.

ಪ್ರಮುಖರಾದ ಬಾಬುರಾವ ಹೊನ್ನಾ, ಫರ್ನಾಂಡಿಸ್ ಹಿಪ್ಪಳಗಾಂವ, ವಿಜಯಕುಮಾರ ಸೋನಾರೆ, ಶಿವಶಂಕರ ಟೋಕರೆ, ಪ್ರೊ. ಜಗನ್ನಾಥ ಕಮಲಾಪುರೆ, ಎಂ.ಪಿ.ಮುದಾಳೆ, ಸುನೀಲ ಭಾವಿಕಟ್ಟಿ, ಕಸ್ತೂರಿಬಾಯಿ ಬೌದ್ಧೆ ಇದ್ದರು. ಡಾ.ಬಸವರಾಜ ಬಲ್ಲೂರ ಸ್ವಾಗತಿಸಿದರು. ಕಸ್ತೂರಿ ಪಟಪಳ್ಳಿ ನಿರೂಪಣೆ ಮಾಡಿದರು. ಶಿವಕುಮಾರ ಕಟ್ಟೆ ವಂದಿಸಿದರು.

ಪ್ರಸ್ತುತ ದಲಿತ ಚಳವಳಿಗಳು ದಿಕ್ಕು ತಪ್ಪುತ್ತಿವೆ. ರೈತರು, ಕಮ್ಯುನಿಸ್ಟರು ಹಾಗೂ ದಲಿತರು ಒಗ್ಗಟ್ಟಾಗಿ ಸೇರಿ ಸಂಘಟನೆ ಮಾಡಬೇಕಾದ ಅಗತ್ಯತೆ ಹಿಂದಿಗಿಂತಲೂ ಈಗ ಹೆಚ್ಚಿನ ಅವಶ್ಯಕವಿದೆ. ದಲಿತ ಬಂಡಾಯ ಸಾಹಿತ್ಯ ಎಂದರೆ ವಚನಗಳೇ ಮೊದಲು.| ಮಾರುತಿ ಬೌದ್ಧೆ, ಹಿರಿಯ ದಲಿತ ಮುಖಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net