

ತುಮಕೂರು: ಅಯೋಧ್ಯೆ ಶ್ರೀರಾಮ ಜನ್ಮಭೂಮಿ ನಿಧಿ ಸಮರ್ಪಣಾ ಅಭಿಯಾನ ಆರಂಭವಾಗಿದ್ದು, ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ದಕ್ಷಿಣ ಭಾರತದ ಟ್ರಸ್ಟಿ ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತುಮಕೂರಿನ ದಲಿತ ಕೇರಿಯ ಮನೆಮನೆಗೆ ತೆರಳಿ ದೇಣಿಗೆ ಸ್ವೀಕರಿಸಿದರು.
ನಗರದ ಎನ್.ಆರ್.ಕಾಲನಿಗೆ ಭಾನುವಾರ ಸಂಜೆ ಭೇಟಿ ನೀಡಿದ ಶ್ರೀಗಳನ್ನು ಭಕ್ತರು ಪುರ್ಷ್ಪಾಚನೆ ಮೂಲಕ ಮನೆಗಳಿಗೆ ಬರಮಾಡಿಕೊಂಡರು. ಶುಚಿಗೊಳಿಸಿ, ರಂಗೋಲಿ ಹಾಕಿದ್ದ ಬೀದಿಯಲ್ಲಿ ಹಬ್ಬದ ವಾತಾವಣವಿತ್ತು. ಈ ಸಂದರ್ಭದಲ್ಲಿ ಶ್ರೀರಾಮನಿಗೆ ಜಯಘೋಷ ಮೊಳಗಿಸಿದ ಭಕ್ತರು ಕೈಲಾದ ದೇಣಿಗೆ ನೀಡಿದರು.
ಸರಸ್ವತಿ, ಗೋವಿಂದರಾಜು ಎಂಬುವವರು ಮನೆಗೆ ಭೇಟಿ ನೀಡಿದ್ದ ಶ್ರೀಗಳಿಗೆ ಪಾದಪೂಜೆ ನೆರವೇರಿಸಿ ದೇಣಿಗೆ ನೀಡಲಾಯಿತು.
ಹನುಮನರಸಿಂಹ, ಉಮಾದೇವಿ, ಶರಾವತಿ ಮಂಜುನಾಥ್, ದಯಾನಂದ್, ಕಿರಣ್ಕುಮಾರ್, ದೇವರಾಜು ಮತ್ತಿತರರ 15 ಮನೆಗಳಿಗೆ ತೆರಳಿದ ಶ್ರೀಗಳು ಕಾಣಿಕೆ ಪಡೆದರು.
ಸುದ್ದಿಗಾರರ ಜತೆ ಮಾತನಾಡಿದ ಸ್ವಾಮೀಜಿ , ‘ಅಯೋಧ್ಯೆ ಶ್ರೀರಾಮಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣಾ ಅಭಿಯಾನ ನಡೆಯುತ್ತಿದ್ದು, ತುಮಕೂರಿನ ಈ ಪರಿಸರಕ್ಕೆ ಬಂದಿದ್ದೇವೆ. ಇಲ್ಲಿನ ರಾಮಭಕ್ತರು ಶಬರಿಯಂತೆ ಕಾಣಿಕೆ ಸಮರ್ಪಣೆ ಮಾಡಿದ್ದಾರೆ. ಸಂತೋಷದಿಂದ ಸ್ವೀಕರಿಸಿ ರಾಮನ ಪಾದಕ್ಕೆ ಸಮರ್ಪಿಸುತ್ತೇವೆ. ಎಲ್ಲ ಭಕ್ತರಿಗೆ ಒಳಿತಾಗಲಿ ಎಂದು ಪ್ರಾರ್ಥಿಸುತ್ತೇನೆ ’ಎಂದರು.
ಅಂಬೇಡ್ಕರ್ ನಗರದ ಯಲ್ಲಮ್ಮ ದೇವಸ್ಥಾನದಲ್ಲಿ ಭಕ್ತರನ್ನುದ್ದೇಶಿಸಿ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಿಸಲು ಅನೇಕರು ಮುಂದೆ ಬಂದರು. ಆದರೆ, ಒಬ್ಬರಿಂದ ನಿರ್ಮಾಣವಾಗಬಾರದು, ದೇಶದ ಎಲ್ಲರ ಪಾಲು ಇರಬೇಕು ಎಂಬ ಉದ್ದೇಶದಿಂದ ನಿಧಿ ಸಮರ್ಪಣಾ ಅಭಿಯಾನ ಕೈಗೊಂಡಿದ್ದೇವೆ, ರಾಮಮಂದಿರ ಭಾವೈಕ್ಯತೆಯ ಮಂದಿರವಾಗಬೇಕು ಎಂದರು.
10 ಕೋಟಿ ರೂ. ನೀಡಿದರೆ ಎಷ್ಟು ಸಂತೋಷದಿಂದ ಸ್ವೀಕರಿಸುತ್ತೇವೋ 10 ರೂ. ಕೊಟ್ಟರೂ ಅಷ್ಟೇ ಪ್ರೀತಿಯಿಂದ ಸ್ವೀಕರಿಸುತ್ತೇವೆ. ಎಷ್ಟು ನೀಡುತ್ತೀರಿ ಎಂಬುದು ಮುಖ್ಯವಲ್ಲ, ಭಕ್ತಿ ಭಾವನೆ ಮುಖ್ಯ ಎಂದು ಆಶೀರ್ವದಿಸಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕರಾದ ಗಂಗಹನುಮಯ್ಯ, ಡಾ.ಎಂ.ಆರ್.ಹುಲಿನಾಯ್ಕರ್, ಹಿಂದು ಜಾಗರಣ ವೇದಿಕೆ ಮುಖಂಡ ಜಿ.ಎಸ್.ಬಸವರಾಜ್, ಆರ್ಎಸ್ಎಸ್ ಜಿಲ್ಲಾ ಪ್ರಮುಖ್ ನಾಗೇಂದ್ರ ಪ್ರಸಾದ್, ಬ್ರಾಹ್ಮಣ ಸಭಾ ಜಿಲ್ಲಾಧ್ಯಕ್ಷ ಎನ್.ಆರ್.ನಾಗರಾಜರಾವ್ ಇದ್ದರು.
ರಾಮಮಂದಿರ ನಿರ್ಮಾಣಕ್ಕೆ ಸಿದ್ಧಗಂಗೆ ನೆರವು: ಎನ್.ಆರ್.ಕಾಲನಿ, ಅಂಬೇಡ್ಕರ್ ನಗರದಲ್ಲಿ ನಿಧಿ ಸಂಗ್ರಹಿಸಿದ ನಂತರ ಕೆ.ಆರ್.ಬಡಾವಣೆಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಸ್ವಾಮೀಜಿ ಅವರಿಗೆ ಅಲ್ಲಿನ ಭಕ್ತರು ನಿಧಿ ಸಮರ್ಪಿಸಿದರು. ನಂತರ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಮಕ್ಕಳ ಸಂಜೆಯ ಸಾಮೂಹಿಕ ಪ್ರಾರ್ಥನೆಯಲ್ಲಿಯೂ ಶ್ರೀಗಳು ಭಾಗಿಯಾಗಿ ಮಕ್ಕಳಿಗೆ ಆಶೀರ್ವಚನ ನೀಡಿದರು. ಶ್ರೀಸಿದ್ದಲಿಂಗ ಸ್ವಾಮೀಜಿ ಅವರು ಶ್ರೀಮಠದ ವತಿಯಿಂದ ದೇಣಿಕೆ ನೀಡಿದರು.