ದಲಿತ ಕುಟುಂಬಗಳಿಗೆ ಸೌಲಭ್ಯ ಸಿಗುತ್ತಿಲ್ಲ

26vtp1 D S S
Published on

ವಿರಾಜಪೇಟೆ: ದಲಿತ ಕುಟುಂಬಗಳಿಗೆ ಸರ್ಕಾರದ ಸೌಲಭ್ಯಗಳು ಸರಿಯಾಗಿ ದೊರಕುತ್ತಿಲ್ಲ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾಧ್ಯಕ್ಷ ಎಚ್.ಆರ್.ಶಿವಣ್ಣ ಹೇಳಿದರು.


ವಿರಾಜಪೇಟೆ ತಾಲೂಕಿನ ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವಾಪ್ತಿಯ ದೇವಣಗೇರಿಯ ಚಿರಾಣೆ ಕಾಲನಿಯಲ್ಲಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ನೂತನ ಸಮಿತಿ ರಚನೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಿಶಿಷ್ಟ ಜಾತಿ/ ಪ.ಪಂಗಡಗಳಿಗೆ ಮೀಸಲಿಟ್ಟಿರುವ ಅನುದಾನವನ್ನು ಗ್ರಾಮ ಪಂಚಾಯಿತಿ ಮೂಲಕ ದಲಿತ ಕುಟುಂಬಗಳಿಗೆ ಒದಗಿಸಿಕೊಡಬೇಕು. ಇಲ್ಲವಾದಲ್ಲಿ ತಾಲೂಕಿನ ಎಲ್ಲ ದಲಿತ ಸಮಿತಿಗಳು ಸೇರಿ ಪಂಚಾಯಿತಿ ಎದುರು ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದರು.


ಅನೇಕ ವರ್ಷಗಳಿಂದ ಕಾಲನಿಯ ಜನರು ಯಾವುದೇ ಸೌಲಭ್ಯಗಳಿಲ್ಲದೆ ಜೀವನ ನಡೆಸುತ್ತಿದ್ದಾರೆ. ಜನಪ್ರತಿನಿಧಿಗಳು ಚುನಾವಣೆ ಸಂದರ್ಭ ಮಾತ್ರ ಬರುತ್ತಾರೆ. ನಂತರ ಸಮಸ್ಯೆಗಳಿಗೆ ಸ್ಪಂದಿಸುತಿಲ್ಲ. ಆದ್ದರಿಂದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹೋರಾಟ ಮಾಡಲಾಗುವುದು ಎಂದು ಹೇಳಿದರು.


ದಲಿತ ಸಮಿತಿ ಜಿಲ್ಲಾ ಉಪಾಧ್ಯಕ್ಷ ಎಚ್.ಜಿ.ಗೋಪಾಲ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನು ಸಮಾಜದ ಉತ್ತಮ ಪ್ರಜೆಗಳಾಗಿ ಮಾಡಬೇಕು ಎಂದರು. ತಾಲೂಕು ಸಮಿತಿ ಸಂಚಾಲಕ ಎಚ್.ಪಿ.ಲವ, ಜಿಲ್ಲಾ ಸಮಿತಿಯ ಎಚ್.ಕೆ.ವಿದ್ಯಾಧರ್, ರೇಣುಕಾ, ಮಧು ಇದ್ದರು.


ಪದಾಧಿಕಾರಿಗಳ ಆಯ್ಕೆ: ಗ್ರಾಮ ಸಂಚಾಲಕರಾಗಿ ಎಚ್.ಜೆ ಬೋಜ, ಉಪ ಸಂಚಾಲಕ ಎಚ್.ಬಿ. ಬಿಪಿನ್, ಖಜಾಂಚಿಯಾಗಿ ಎಚ್.ಎಂ.ಗೋಪಿ ಅವರನ್ನು ಆಯ್ಕೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net