ದರ್ಶನ್‌ಗೆ ಟಿಕೆಟ್ ಕೊಡಿಸಲು ನಿರ್ಣಯ

Published on

ಕೊಳ್ಳೇಗಾಲ: ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿ.ಆರ್.ಧ್ರುವನಾರಾಯಣ ಅವರ ಪುತ್ರ ದರ್ಶನ್ ಧ್ರುವನಾರಾಯಣ ಅವರಿಗೆ ನಂಜನಗೂಡು ವಿಧಾನಸಭಾ ಕ್ಷೇತ್ರದ ಟಿಕೆಟ್ ಕೊಡಿಸಿ ಗೆಲ್ಲಿಸಿಕೊಳ್ಳುವ ನಿಟ್ಟಿನಲ್ಲಿ ಸಂಕಲ್ಪದ ನಿರ್ಣಯ ಕೈಗೊಳ್ಳಲಾಯಿತು.
ಪಟ್ಟಣದ ಭ್ರಮರಾಂಬ ಕಲ್ಯಾಣ ಮಂಟಪದಲ್ಲಿ ಕ್ಷೇತ್ರ ಕಾಂಗ್ರೆಸ್ ಸಮಿತಿ ವತಿಯಿಂದ ಗುರುವಾರ ಆಯೋಜಿಸಿದ್ದ ದಿ.ಆರ್.ಧ್ರುವನಾರಾಯಣ ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ನಿರ್ಣಯ ತೆಗೆದುಕೊಂಡರು.
ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, 90ರ ದಶಕದಿಂದಲೂ ಚಾಮರಾಜನಗರ ಜಿಲ್ಲೆಯನ್ನು ಪ್ರತಿನಿಧಿಸಿ ರಾಜಕಾರಣದ ಧ್ರುವತಾರೆಯಾಗಿದ್ದ ದಿ.ಆರ್.ಧ್ರುವನಾರಾಯಣ ಅವರು ನಮ್ಮನ್ನು ಅಗಲಿದ್ದಾರೆ. ಅವರ ಹಾಗೂ ನನ್ನ ಸಂಬಂಧ ವಿಶೇಷವಾದದ್ದು. ರಾಜಕೀಯವನ್ನೂ ಮೀರಿದ್ದು. ನಮ್ಮ ತಂದೆ ಬಿ.ರಾಚಯ್ಯ ಅವರ ಕುಟುಂಬದ ಬಾಂಧವ್ಯ ಹೊಂದಿದ್ದರು. ವಿದ್ಯಾಭ್ಯಾಸದ ದಿಸೆಯಿಂದಲೂ ಧ್ರುವ ಅವರ ಒಡನಾಟ ಹೊಂದಿದ್ದೇನೆ. ರಾಜಕೀಯವಾಗಿ ನಾವು ಪರಸ್ಪರ ಎದುರಾಗಿದ್ದೇವೆ. ನನ್ನ ವಿರುದ್ಧ 1 ಮತದ ಗೆಲುವು ಸಾಧಿಸಿದ್ದರು. ಆದರೆ ವೈಯಕ್ತಿಕವಾಗಿ ಒಳ್ಳೆಯ ಸಂಬಂಧ ಹೊಂದಿದ್ದೆವು ಎಂದು ಸ್ಮರಿಸಿದರು.
ಕಾಂಗ್ರೆಸ್ ಸೇರ್ಪಡೆ ಸಂದರ್ಭದಲ್ಲಿ ಪ್ರೀತಿಯಿಂದ ನನ್ನನ್ನು ಬರಮಾಡಿಕೊಂಡಿದ್ದರು. 2018ರ ಚುನಾವಣೆಯಲ್ಲಿ ಬೆಂಬಲಿಸಿದ್ದರು. ಈ ಕಾರಣ 52 ಸಾವಿರ ಮತ ಪಡೆಯಲು ಸಾಧ್ಯವಾಯಿತು. ಇಂತಹ ಮೇರು ವ್ಯಕ್ತಿತ್ವ, ಸರಳ ಸಜ್ಜನ ರಾಜಕಾರಣಿ ಅಗಲಿರುವುದು ಜಿಲ್ಲೆ ತುಂಬಲಾರದ ನಷ್ಟವಾಗಿದೆ. ತಮ್ಮ ಪತ್ನಿ ಅನಾರೋಗ್ಯಪೀಡಿತರಾದರೂ ಆ ನೋವನ್ನು ನುಂಗಿಕೊಂಡು ಪಕ್ಷ ಸಂಘಟನೆಯಲ್ಲಿ ನಿರತರಾಗಿದ್ದರು. ಶೀಘ್ರವೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಧ್ರುವ ಅವರ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಲಿದ್ದಾರೆ. ಅಂದೇ ದರ್ಶನ್ ಧ್ರುವನಾರಾಯಣ ಅವರಿಗೂ ಟಿಕೆಟ್ ಘೋಷಣೆ ಮಾಡಲಿದ್ದಾರೆ ಎಂದು ಭಾವಿಸಿದ್ದೇನೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಸ್ವಾಮಿ ಮಾತನಾಡಿ, ಆರ್.ಧ್ರುವನಾರಾಯಣ ಪಕ್ಷವನ್ನು ತಾಯಿ ಎನ್ನುತ್ತಿದ್ದರು. ಎಲ್ಲರ ಸಮಸ್ಯೆ ಬಗೆಹರಿಸುವ ಮೂಲಕ ಎಲ್ಲ ವರ್ಗದ ನಾಯಕರಾಗಿದ್ದರು. ಜಿಲ್ಲೆಯ ನಾಲ್ಕು ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲಬೇಕೆಂಬುದು ಅವರ ಆಸೆ ಆಗಿತ್ತು. ಆದ್ದರಿಂದ ಧ್ರುವನಾರಾಯಣ ಅವರ ಆತ್ಮಕ್ಕೆ ಶಾಂತಿ ಸಿಗಬೇಕೆಂದರೆ 4 ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲಿಸಲು ಶ್ರಮಿಸೋಣ ಎಂದರು.
ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ, ಬಾಲರಾಜು, ಜಯಣ್ಣ, ಜಿ.ಎನ್.ನಂಜುಂಡಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಸ್ವಾಮಿ, ನಗರಸಭೆ ಅಧ್ಯಕ್ಷೆ ರೇಖಾ, ಉಪಾಧ್ಯಕ್ಷೆ ಸುಶೀಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ಕಾರ್ಯದರ್ಶಿ ರವಿ ಬಸ್ತೀಪುರ ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಶಿವಕುಮಾರ್ ಮಧುವನಹಳ್ಳಿ, ಮುಖಂಡ ದಾಸಣ್ಣ, ಕೊಪ್ಪಳಿನಾಯಕ, ನಗರಸಭೆ ಸದಸ್ಯರಾದ ಶಾಂತರಾಜು, ಅಕ್ಮಲ್, ಮುಖಂಡರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net