ಬಳ್ಳಾರಿ : ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ಗೆ ಸೆ. 17 ರಂದು ನ್ಯಾಯಾಂಗ ಬಂಧನ ಮುಕ್ತಾಯಗೊಳ್ಳಲಿದ್ದು, ಇಲ್ಲಿನ ಕೇಂದ್ರ ಕಾರಾಗೃಹದಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ಇಂದು ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ ಎಂದು ಜೈಲು ಅಧಿಕಾರಿಗಳು ತಿಳಿಸಿದರು.
ದರ್ಶನ್ ದೇಹವನ್ನು ಕಾಪಾಡಿಕೊಳ್ಳಲು ಜೈಲು ಸಿಬ್ಬಂದಿ ಬಳಿ ವಿಟಿಮಿನ್ ಮಾತ್ರೆ ನೀಡುವಂತೆ ಮನವಿ ಮಾಡಿದ್ದಾರೆ. ಅದಕ್ಕೆ ಸಿಬ್ಬಂದಿ ಸ್ಪಂದಿಸಿ, ವೈದ್ಯರ ಸಲಹೆಯಂತೆ ದೇಹಕ್ಕೆ ಎಷ್ಟು ಅಗತ್ಯವಿದೆಯೋ, ಅಷ್ಟು ಮಾತ್ರ ಮಾತ್ರೆಗಳನ್ನು ನೀಡಲು ಒಪ್ಪಿದ್ದಾರೆ. ಸದ್ಯ ಬಹಳ ದಿನಗಳಿಂದ ಬೇಡಿಕೆಯಿಟ್ಟಿರುವ ಟಿವಿ ನೀಡಲು ಅಧಿಕಾರಿಗಳು ಮೀನಾಮೇಷ ತೋರುತ್ತಿದ್ದಾರೆ. ಇತ್ತೀಚೆಗೆ ಪತ್ನಿ ಜೈಲಿಗೆ ಭೇಟಿ ನೀಡಿದ ವೇಳೆ ದರ್ಶನ್ ಮಾಧ್ಯಮಗಳಿಗೆ ಬೆರಳು ಸನ್ನೆ ವಿವಾದ ಸೃಷ್ಟಿಯಾಗಿದ್ದರಿಂದ ಟಿವಿ ನೀಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂಬ ಅಂಶ ಬಯಲಾಗಿದೆ. ಆದ್ದರಿಂದ, ಹಳೆಯ ಟಿವಿ ರಿಪೇರಿ ಮಾಡಿ ರಾಜ್ಯ ಕಾರಾಗೃಹ ಇಲಾಖೆಯ ಡಿಐಜಿ ಅನುಮತಿ ಪಡೆದು ಎರಡ್ಮೂರು ದಿನಗಳಲ್ಲಿ ಸೆಲ್‌ಗೆ ಟಿವಿ ಅಳವಡಿಸುವ ಸಾಧ್ಯತೆಯಿದೆ. ನ್ಯಾಯಾಂಗ ಬಂಧನ ಮುಕ್ತಾಯವಾಗಿದ್ದರಿಂದ ವಕೀಲರಿಂದ ದರ್ಶನ್‌ಗೆ ವೈಯಕ್ತಿಕ ಪತ್ರ ಬಂದಿದೆ. ಆದರೆ, ಜೈಲು ಸಿಬ್ಬಂದಿ ಹಾಗೂ ಅಧಿಕಾರಿಗಳು ಪತ್ರ ಪರಿಶೀಲಿಸದೆ ನೇರವಾಗಿ ದರ್ಶನ್‌ಗೆ ತಲುಪಿಸಲಾಗಿದೆ ಎಂದು ಜೈಲು ಅಧೀಕ್ಷಕಿ ಲತಾ ತಿಳಿಸಿದರು.