

ಚಿತ್ರದುರ್ಗ: ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪ ಎದುರಿಸುತ್ತಿರುವ ದಾಸ ಚಿತ್ರ ಖ್ಯಾತಿಯ ನಟ ದರ್ಶನ್ ವಿರುದ್ಧ ಕೋಟೆನಗರಿಯಲ್ಲಿ ಬುಧವಾರ ಬುಗಿಲೆದ್ದ ಆಕ್ರೋಶ ವ್ಯಕ್ತವಾಯಿತು.
ವೀರಶೈವ ಜಂಗಮ, ಲಿಂಗಾಯತ ಸೇರಿ ವಿವಿಧ ಸಮುದಾಯ, ವಿಶ್ವ ಹಿಂದು ಪರಿಷತ್, ಬಜರಂಗದಳ, ಕರ್ನಾಟಕ ರಕ್ಷಣಾ ವೇದಿಕೆ, ರಾಜ್ಯ ರೈತಸಂಘ, ಪ್ರಜಾ ಕಲ್ಯಾಣ ಸಮಿತಿ ಒಳಗೊಂಡು ವಿವಿಧ ಪಕ್ಷ ಹಾಗೂ ಸಂಘಟನೆಗಳ ಕಾರ್ಯಕರ್ತರು, ಮುಖಂಡರು ಪಕ್ಷಾತೀತವಾಗಿ ಬೀದಿಗಿಳಿದು ದುರ್ಘಟನೆ ಖಂಡಿಸಿ, ದರ್ಶನ್ ವಿರುದ್ಧ ಕಿಡಿಕಾರಿದರು.
ಎಂಎಲ್ಸಿ ಕೆ.ಎಸ್.ನವೀನ್ ಮಾತನಾಡಿ, ರೇಣುಕಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದರೆ, ಕಾನೂನು ಮೂಲಕ ಕ್ರಮ ಕೈಗೊಳ್ಳಲು ಅವಕಾಶವಿತ್ತು. ಆದರೆ, ಭೀಕರವಾಗಿ ಹತ್ಯೆಗೈದಿರುವುದು ಅಮಾನವೀಯ ಕೃತ್ಯ. ಆರೋಪ ಎದುರಿಸುತ್ತಿರುವ ದರ್ಶನ್ ನಟರಾಗಲು ನಾಲಾಯಕ್ಕು. ಇಡೀ ರಾಜ್ಯಕ್ಕೆ ಖಳನಾಯಕರಾಗಿದ್ದಾರೆ ಎಂದರು.
ಗೂಂಡಾ ರಾಜ್ಯ: ಸಾಮಾಜಿಕ ಜಾಲತಾಣದಲ್ಲಿ ಇಂತಹ ಲಕ್ಷಾಂತರ ವಿಡಿಯೋ ಒಬ್ಬರಿಗೊಬ್ಬರು ಶೇರ್ ಮಾಡಿಕೊಳ್ಳುತ್ತಾರೆ. ಆಗಂತ ಕೊಲೆಯೊಂದೇ ಪರಿಹಾರವಲ್ಲ. ಶಿಕ್ಷೆ ಕೊಡಿಸಲು ಅವಕಾಶವಿದೆ. ಆದರೆ, ಬೆಂಗಳೂರಿಗೆ ಕರೆದೊಯ್ದು ಕೊಲೆ ಮಾಡಿದ್ದಾರೆ. ಕಾನೂನಿಗಿಂತ ಮೇಲೂ ಎಂದುಕೊಂಡಿದ್ದಾರೆ. ಕಳೆದ ಆರು ತಿಂಗಳಿನಿಂದಲೂ ಒಂದಿಲ್ಲೊಂದು ದುರ್ಘಟನೆ ನಡೆಯುತ್ತಿದ್ದು, ಗೂಂಡಾ ರಾಜ್ಯವಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ದರ್ಶನ್ ಮತ್ತು ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲೇಬೇಕು. ಒಂದು ವೇಳೆ ತನಿಖೆ ದಿಕ್ಕು ತಪ್ಪಿದರೆ, ಪ್ರಧಾನಿ ಗಮನಕ್ಕೆ ತಂದು ಸಿಬಿಐ ತನಿಖೆಗೆ ಒತ್ತಾಯಿಸಿ ರಾಜ್ಯಾದ್ಯಂತ ಬೀದಿಗಿಳಿಯಲಾಗುವುದು ಎಂದು ಎಚ್ಚರಿಸಿದರು.
ದರ್ಶನ್ ಮೇಲಿನ ಅಭಿಮಾನ ಕೈಬಿಟ್ಟು, ಅಭಿಮಾನಿ ಸಂಘಗಳನ್ನು ವಿಸರ್ಜಿಸಿ ಹೋರಾಟಕ್ಕೆ ಕೈಜೋಡಿಸಿ ಎಂದು ಕೋರಿದರು.
ಸಂವಿಧಾನದಡಿ ಕ್ರಮವಹಿಸಿ: ದುರ್ಗದ ಹುಡುಗ ರೇಣುಕಸ್ವಾಮಿ ಹತ್ಯೆ ಅತ್ಯಂತ ಖಂಡನೀಯವಾದುದು. ಯಾರೇ ಆಗಲಿ, ಎಷ್ಟೇ ಹೆಸರು ಗಳಿಸಿದ್ದರೂ ಕಾನೂನು ಕೈಗೆತ್ತಿಕೊಳ್ಳುವುದು ಶೋಭೆ ತರುವಂತದ್ದಲ್ಲ. ಸಂವಿಧಾನದಡಿ ಕಾನೂನು ಕ್ರಮ ಕೈಗೊಂಡು ಸರ್ಕಾರ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಶ್ರೀ ಬಸವನಾಗಿದೇವ ಸ್ವಾಮೀಜಿ ಒತ್ತಾಯಿಸಿದರು.
ಜೀವಾವಧಿ ಶಿಕ್ಷೆಯಾಗಲಿ: ಸಿನಿಮಾಗಳ ಮೂಲಕ ಸಮಾಜ ತಿದ್ದುವ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ದರ್ಶನ್ ಮೇಲಿರುವ ಆರೋಪಗಳನ್ನು ಗಮನಸಿದರೆ, ನಿಜ ಜೀವನದಲ್ಲೇ ಭಿನ್ನ ವ್ಯಕ್ತಿ ಎಂಬುದು ಗೊತ್ತಾಗುತ್ತಿದೆ. ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಿದ್ದು, ಹಲವು ಸಚಿವರ ಒಡನಾಟವಿದೆ. ಯಾವ ಕಾರಣಕ್ಕೂ ಪ್ರಕರಣ ಮುಚ್ಚಿ ಹಾಕಬಾರದು. ಜೀವಾವಧಿ ಶಿಕ್ಷೆಯಾಗಲೇಬೇಕು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಒತ್ತಾಯಿಸಿದರು. ಪ್ರತಿ ಬಾರಿ ಗೃಹ ಸಚಿವರು ನೀಡುತ್ತಿರುವ ಹೇಳಿಕೆ ಸೂಕ್ತವಲ್ಲ. ತನಿಖೆ ವಿಫಲಗೊಳಿಸಲು ಪ್ರಯತ್ನಿಸಿದರೆ, ರಾಜ್ಯಾದ್ಯಂತ ಹೋರಾಟ ನಡೆಯಲಿದೆ ಎಂದು ಎಚ್ಚರಿಸಿದರು.
ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಮಾತನಾಡಿ, ದರ್ಶನ್‌ಗೆ ಅಂಧಾಭಿಮಾನಿಗಳು ಹೆಚ್ಚಾಗಿರುವ ಕಾರಣ ಇಂತಹ ದುಷ್ಕೃತ್ಯ ಎಸಗಲು ಕಾರಣವಾಗಿದೆ. ಪೊಲೀಸರು ಪ್ರಾಮಾಣಿಕತೆ ಮೆರೆದು ಕರ್ನಾಟಕ ಪೊಲೀಸರು ಈ ಘಟನೆ ಸಂಬಂಧ ನೋಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ನಗರಸಭೆ ಸದಸ್ಯ ಸೊಪ್ಪು ಸುರೇಶ್, ಮಾಜಿ ಅಧ್ಯಕ್ಷೆ ಸುನೀತಾ ಮಲ್ಲಿಕಾರ್ಜುನ್, ಮುಖಂಡರಾದ ಷಡಾಕ್ಷರಯ್ಯ, ಕೆ.ಎಂ.ವೀರೇಶ್, ಕೆಇಬಿ ಷಣ್ಮುಖಪ್ಪ, ಮರುಳಾರಾಧ್ಯ, ಹರೀಶ್, ಮಹೇಶ್, ಮಲ್ಲಿಕಾರ್ಜುನ್, ಗಡ್ಡದೇವರಮಠ, ಉಮಾಪತಯ್ಯ, ಆರ್.ಎಸ್.ತಿಪ್ಪೇಸ್ವಾಮಿ, ಕೆ.ಸಿ.ರುದ್ರೇಶ್, ಕೆಪಿಎಂ ಗಣೇಶಯ್ಯ, ಕಲ್ಲೇಶಯ್ಯ, ಚಿನ್ಮಯಿ, ಶಿವಾನಂದ, ಎಲ್.ಜಿ.ಸಿದ್ದೇಶ್, ಕರವೇ ರಮೇಶ್, ಆನಂದ್‌ಕುಮಾರ್, ಮೋಕ್ಷಾ ರುದ್ರಸ್ವಾಮಿ, ಶಂಕರ್, ಕೇಸರಿ ಕುಮಾರ್ ಇತರರಿದ್ದರು.