ದರ್ಶನ್ ವಿಚಾರಣೆ ನಡೆಸಿದ ಐಟಿ ಅಧಿಕಾರಿಗಳು

26 YERRISWAMY 06
Published on

ಬಳ್ಳಾರಿ : ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಆರೋಪಿ ದರ್ಶನ್ ನನ್ನು ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಆದಾಯ ತೆರಿಗೆ ಇಲಾಖೆ (ಐಟಿ )ಅಧಿಕಾರಿಗಳು ಗುರುವಾರ ವಿಚಾರಣೆ ನಡೆಸಿದರು.
ರೇಣುಕಸ್ವಾಮಿ ಕೊಲೆ ಬಳಿಕ ಆರೋಪವನ್ನು ಬೇರೆಯವರಿಗೆ ಹೊರಿಸಲು ನಡೆದಿದೆ ಎನ್ನಲಾದ ಹಣದ ವಹಿವಾಟು ಸಂಬಂಧ ದರ್ಶನ್‌ಗೆ ಪ್ರಶ್ನೆಸಿದ್ದಾರೆ. ಜೈಲು ಅಧೀಕ್ಷಕರ ಕಚೇರಿಯಲ್ಲಿ ಅಧೀಕ್ಷಕರ ಸಮುಖದಲ್ಲೇ ವಿಚಾರಣೆ ನಡೆದಿತ್ತು. ಐಟಿ ಅಧಿಕಾರಿಗಳ ವಿಚಾರಣೆ ಹಿನ್ನೆಲೆಯಲ್ಲಿ ದರ್ಶನ್‌ರ ಆಡಿಟರ್ ಎಂ. ಆರ್. ರಾವ್, ಸಹಾಯಕ ಅರುಣ್ ಅವರು ಸಹ ಆಗಮಿಸಿದ್ದು, ಐಟಿ ಅಧಿಕಾರಿಗಳ ಪ್ರಶ್ನೆಗಳಿಗೆ ಆಡಿಟರ್‌ಗಳು ದಾಖಲೆಗಳನ್ನು ಒದಗಿಸುತ್ತಿದ್ದರು ಎಂದು ಮೂಲಗಳು ತಿಳಿಸಿದವು.
ವಿಚಾರಣೆ ವೇಳೆ ಐಟಿ ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ದರ್ಶನ್ ಉತ್ತರಿಸುತ್ತಿದ್ದಂತೆ ಅದಕ್ಕೆ ತಕ್ಕಂತೆ ದರ್ಶನ್ ಪರ ಆಡಿಟರ್ ಎಂ.ಆರ್. ರಾವ್, ಸಹಾಯಕ ಅರುಣ್ ಅವರು ನೀಡುತ್ತಿದ್ದ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಕೊಲೆ ಬಳಿಕ ನಡೆದಿರುವ ಹಣದ ವಹಿವಾಟು ಮತ್ತು ಆಡಿಟರ್‌ಗಳು ನೀಡಿರುವ ದಾಖಲೆಗಳನ್ನು ಐಟಿ ಅಧಿಕಾರಿಗಳು ತಾಳೆ ಹಾಕಿದ್ದಾರೆ. ಜೈಲಲ್ಲಿ ದರ್ಶನ್‌ಗೆ ಐಟಿ ವಿಚಾರಣೆಗೆ ಎರಡು ದಿನಗಳು ಮೀಸಲಿರಿಸಲಾಗಿದ್ದು, ಮೊದಲದಿನ ಗುರುವಾರವೇ ಪೂರ್ಣಗೊಳಿಸುವ ಸಾಧ್ಯತೆಯಿದೆ. ಅಗತ್ಯಬಿದ್ದರೆ ಶುಕ್ರವಾರ ಮುಂದುವರೆಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಆಪ್ತರ ಆಗಮನ : ಜೈಲಲ್ಲಿರುವ ಆರೋಪಿ ದರ್ಶನ್‌ನನ್ನು ಭೇಟಿ ಮಾಡಲು ಆಪ್ತರಾದ ಡೆವಿಲ್ ಚಿತ್ರನಿರ್ಮಾಪಕ ಜೆ.ವಿ. ಪ್ರಕಾಶ್, ಸುನೀಲ್ ಕುಮಾರ್, ಶ್ರೀನಿವಾಸ್ ಮೂವರು ಆಗಮಿಸಿದ್ದರು. ಬೆಳಗ್ಗೆಯೇ ಜೈಲು ಸಿಬ್ಬಂದಿ ಬಳಿ ಸಮಯ ನಿಗದಿಪಡಿಸಿ ಬೆಳಗ್ಗೆಯೇ ಜೈಲು ಬಳಿಗೆ ಬಂದಿದ್ದ ಆಪ್ತರಿಗೆ, ವಿಚಾರಣೆ ಹಿನ್ನೆಲೆಯಲ್ಲಿ ಜೈಲು ಅಧಿಕಾರಿಗಳು ಭೇಟಿ ಅವಕಾಶ ನೀಡಲಿಲ್ಲ. ಇದರಿಂದ ವಾಪಸ್ ತೆರಳಿದ ಆಪ್ತರು, ಬಳಿಕ ಸಂಜೆ 4.15 ರಿಂದ 4.30ರ ವರೆಗೆ ಅವಕಾಶ ನೀಡಿದ್ದ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳ ವಿಚಾರಣೆ ನಡುವೆ 15 ನಿಮಿಷಗಳ ಕಾಲ ದರ್ಶನ್‌ನನ್ನು ಭೇಟಿ ಮಾಡಲು ಆಪ್ತರಿಗೆ ಅವಕಾಶ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net