ಬಳ್ಳಾರಿ : ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಭೇಟಿಗಾಗಿ ಜಿಲ್ಲೆಗೆ ಆಗಮಿಸಿದ್ದ ಪತ್ನಿ ವಿಜಯಲಕ್ಷ್ಮೀ, ಜೈಲಿಗೆ ಭೇಟಿ ನೀಡದೆ ಖಾಸಗಿ ಹೊಟೇಲ್‌ನಲ್ಲಿಯೇ ವಾಸ್ತವ್ಯ ಹೂಡಿ ವಾಪಸ್ ತೆರಳಿದರು ಎಂದು ಮೂಲಗಳು ತಿಳಿಸಿದವು.
ಇಲ್ಲಿನ ಕೇಂದ್ರ ಕಾರಾಗೃಹದಲ್ಲಿರುವ ದರ್ಶನ್ ಭೇಟಿ ಮಾಡಲು ಪತ್ನಿ ವಿಜಯಲಕ್ಷ್ಮೀ ಬೆಳಗ್ಗೆ ಜೈಲು ಅಧಿಕಾರಿಗಳ ಅನುಮತಿ ಪಡೆದಿದ್ದ ರು. ಆದರೆ, ಸಂಜೆಯಾದರು ದರ್ಶನ್ ಭೇಟಿ ಮಾಡಲು ಜೈಲಿನತ್ತ ಆಗಮಿಸಲಿಲ್ಲ. ದರ್ಶನ್ ಅಪ್ತರಾದ ನಟ ಧನ್ವೀರ್, ಹೇಮಂತ್ ಹಾಗೂ ಸಂಬಂಧಿ ಸುಶಾಂತ ನಾಯ್ಡು ಸೇರಿದಂತೆ ಮೂವರು ಸಂಜೆ ಜೈಲಿಗೆ ಭೇಟಿ ನೀಡಿ ದರ್ಶನ್ ಆರೋಗ್ಯ ವಿಚಾರಿಸಿದರು. ಸುಮಾರು ಅರ್ಧ ಗಂಟೆ ಕಾಲ ಅಪ್ತರ ಜತೆ ಮಾತನಾಡಿದ ದರ್ಶನ್ ಬೇಲ್ ವಜಾ ಹಾಗೂ ಪತ್ನಿ ವಿಜಯಲಕ್ಷ್ಮೀ ಏಕೆ ಭೇಟಿ ನೀಡಲಿಲ್ಲ ಎಂಬುದರ ಮಾಹಿತಿ ನೀಡಿದರು. ಬಳಿಕ ದರ್ಶನ್‌ಗಾಗಿ ಬೇಕರಿಯ ತಿಂಡಿ ತಿನಿಸುಗಳು, ಡ್ರೈ ಫ್ರೂಟ್ಸ್ , ಬಟ್ಟೆ ಸೇರಿದಂತೆ ಮೂರು ಬ್ಯಾಗ್‌ಗಳನ್ನು ತರಲಾಗಿತ್ತು. ಅಪ್ತರ ಜತೆ ದರ್ಶನ್ ಚರ್ಚಿಸಿ ಬ್ಯಾಗ್‌ಗಳನ್ನು ಹಿಡಿದುಕೊಂಡು ಮರಳಿ ಹೈ ಸೆಕ್ಯೂರಿಟಿ ಸೆಲ್‌ಗೆ ತೆರಳಿದರು. ಸೋಮವಾರ ದರ್ಶನ್ ಜಾಮೀನು ದೊರೆಯಬಹುದು ಎಂಬ ವಿಶ್ವಾಸದಿಂದ ಅಭಿಮಾನಿಗಳು ದರ್ಶನ್ ಭಾವಚಿತ್ರದ ಪೋಟೊ ಹಿಡಿದು ಜೈಲಿನ ಮುಂಭಾಗದಲ್ಲಿ ಜಮಾಯಿಸಿದರು. ದರ್ಶನ್ ಸೆಲ್‌ನಿಂದ ಅಪ್ತರ ಭೇಟಿಗೆ ಸಂದರ್ಶಕರ ಕೋಣೆಗೆ ತೆರಳುವಾಗ ಹಾಗೂ ಮರಳಿ ಸೆಲ್‌ಗೆ ಹೋಗುವಾಗ ಜೈ ಡಿ ಬಾಸ್ ಎಂದು ಘೋಷಣೆ ಕೂಗಿದರು. ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದರು. ದರ್ಶನ್‌ಗೆ ಜಾಮೀನು ಸಿಗಬಹುದು ಎಂಬ ವಿಶ್ವಾಸದಲ್ಲಿದ್ದ ಅಭಿಮಾನಿಗಳಿಗೆ ಸಂಜೆ ಕೋರ್ಟ್‌ನಿಂದ ಜಾಮೀನು ಅರ್ಜಿ ವಜಾ ಸುದ್ದಿ ತಿಳಿದು ಬೇಸರದಿಂದ ಮನೆಗೆ ತೆರಳಿದರು.