ದರ್ಶನ್ ಭೇಟಿ ಮಾಡಿದ ಪತ್ನಿ ವಿಜಯಲಕ್ಷ್ಮೀ

23 YERRISWAMY 07
Published on

ಬಳ್ಳಾರಿ : ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಭೇಟಿ ಮಾಡಲು ಇಲ್ಲಿನ ಕೇಂದ್ರ ಕಾರಾಗೃಹಕ್ಕೆ ಪತ್ನಿ ವಿಜಯಲಕ್ಷ್ಮೀ , ಅಳಿಯ ಹೇಮಂತ್ ಹಾಗೂ ಸಂಬಂಧಿ ಸುಶಾಂತ್ ನಾಯ್ಡು ಸೋಮವಾರ ಆಗಮಿಸಿದ್ದರು.
ಜೈಲಿಗೆ ಸೋಮವಾರ ಸಂಜೆ ಆಗಮಿಸಿದ ಪತ್ನಿ ವಿಜಯಲಕ್ಷ್ಮೀ ಹಣ್ಣುಗಳು, ಡ್ರೈ ಫ್ರೂಟ್ಸ್, ತಿಂಡಿ ತಿನಿಸುಗಳು ಹಾಗೂ ಬಟ್ಟೆಗಳು ಸೇರಿ ಎರಡು ಬ್ಯಾಗ್‌ಗಳನ್ನು ತಂದಿದ್ದರು. ಜೈಲಿನೊಳಗೆ ಪ್ರವೇಶಿಸುತ್ತಿದ್ದಂತೆ ಸಿಬ್ಬಂದಿ ಜೈಲು ನಿಯಮದಂತೆ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಕೈದಿಗಳ ಸಂದರ್ಶಕರ ಕೊಠಡಿಗೆ ಕಳುಹಿಸಲಾಯಿತು. ಬಳಿಕ ಹೈ ಸೆಕ್ಯೂರಿಟಿ ಸೆಲ್‌ನಿಂದ ದರ್ಶನ್ ಕರೆ ತರಲಾಯಿತು. ಬಳಿಕ ಪತ್ನಿ ವಿಜಯಲಕ್ಷ್ಮೀ ನ್ಯಾಯಾಲಯದಲ್ಲಿ ಸೋಮವಾರ ನಡೆದ ಜಾಮೀನಿನ ಅರ್ಜಿ ಮುಂದೂಡಿಕೆ ಹಾಗೂ ಈ ಕೊಲೆ ಪ್ರಕರಣದಲ್ಲಿ ಮೂವರಿಗೆ ಜಾಮೀನು ನೀಡಿದ ಬಗ್ಗೆ ದರ್ಶನ್‌ಗೆ ಸವಿಸ್ತಾರವಾಗಿ ವಿವರಿಸಿದರು. ನಿಮ್ಮ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಸೆ. 27ಕ್ಕೆ ಮುಂದೂಡಿದ್ದು, ಕೆಲವೇ ದಿನಗಳಲ್ಲಿ ನಿಮಗೂ ಜಾಮೀನು ದೊರೆಯಲಿದೆ ಎಂದು ಪತ್ನಿ ವಿಜಯಲಕ್ಷ್ಮೀ ಅವರು ದರ್ಶನ್‌ಗೆ ಧೈರ್ಯ ತುಂಬಿದರು. ನಂತರ ಆರೋಗ್ಯ ಸಮಸ್ಯೆ ಹಾಗೂ ಜೈಲು ಸಿಬ್ಬಂದಿ ಸೌಲಭ್ಯ ನೀಡಲು ನಿರಾಕರಿಸುತ್ತಿರುವ ಬಗ್ಗೆ ಪತ್ನಿ ಎದುರು ದರ್ಶನ್ ಅಳಲು ತೋಡಿಕೊಂಡರು ಎಂದು ಮೂಲಗಳು ತಿಳಿಸಿದವು. ಇಲ್ಲಿನ ಕೇಂದ್ರ ಕಾರಾಗೃಹಕ್ಕೆ ದರ್ಶನ್ ಸ್ಥಳಾಂತರಗೊಂಡು 28 ದಿನಗಳು ಕಳೆದಿವೆ. ಇದರಲ್ಲಿ ಐದು ಬಾರಿ ಪತ್ನಿ ವಿಜಯಲಕ್ಷ್ಮೀ ಭೇಟಿ ನೀಡಿದ್ದಾರೆ. ಅವರ ಅಕ್ಕ, ಬಾವ, ತಾಯಿ ಹಾಗೂ ಅಪ್ತರು ತಲಾ ಒಂದು ಬಾರಿ ಭೇಟಿ ನೀಡಿ ದರ್ಶನ್ ಆರೋಗ್ಯ ವಿಚಾರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net