ದರ್ಶನ್ ಭೇಟಿ ಮಾಡಿದ ಪತ್ನಿ, ಪುತ್ರ

Published on

ಬಳ್ಳಾರಿ : ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಭೇಟಿ ಮಾಡಲು ಇಲ್ಲಿನ ಕೇಂದ್ರ ಕಾರಾಗೃಹಕ್ಕೆ ಪತ್ನಿ ವಿಜಯಲಕ್ಷ್ಮೀ, ಪುತ್ರ ವಿನೀಶ್ ಹಾಗೂ ಇಬ್ಬರು ಅಪ್ತ ಸಹಾಯಕರು ಗುರುವಾರ ಆಗಮಿಸಿದ್ದರು.
ದರ್ಶನ್‌ಗಾಗಿ ತಂದಿದ್ದ ಡ್ರೈ ಫ್ರೂಟ್ಸ್ , ಬೇಕರಿಯ ತಿಂಡಿ ತಿನಿಸು ಹಾಗೂ ಬಟ್ಟೆ ಗಳು ಸೇರಿದ ಎರಡು ಬ್ಯಾಗ್‌ಗಳನ್ನು ಜೈಲಿನ ಸಿಬ್ಬಂದಿ ಪರಿಶೀಲಿಸಿ ಬಳಿಕ ವಿಜಯಲಕ್ಷ್ಮೀ ಅವರನ್ನು ಸಂದರ್ಶಕರ ಕೋಣೆಗೆ ಕಳುಹಿಸಲಾಯಿತು. ಹೈ ಸೆಕ್ಯೂರಿಟಿ ಸೆಲ್‌ನಿಂದ ಆಗಮಿಸಿದ ದರ್ಶನ್ ಪತ್ನಿ, ಪುತ್ರನನ್ನು ವೀಕ್ಷಿಸಲು ನಗು ಮುಖದಲ್ಲಿ ಬಂದರು. ಮಗ ವಿನೀಶ್ ತಂದೆ ದರ್ಶನ್‌ನನ್ನು ಕಂಡು ಬಾವುಕರಾದರು. ಬಳಿಕ ದರ್ಶನ್, ಮಗ ವಿನೀಶ್ ಹಾಗೂ ಪತ್ನಿಗೆ ಅದಷ್ಟು ಬೇಗ ಹೊರಗೆ ಬರುವೆ ಎಂದು ಧೈರ್ಯ ತುಂಬಿದರು. ಅರ್ಧ ಗಂಟೆ ಕಾಲ ಮಗ ಹಾಗೂ ಪತ್ನಿ ಜತೆ ವಿದ್ಯಾಭ್ಯಾಸ ಮತ್ತು ಆರೋಗ್ಯದ ಬಗ್ಗೆ ಮಾತುಕತೆ ನಡೆಸಿದರು. ಅ. 4 ರಂದು ನಡೆಯುವ ಜಾಮೀನು ಅರ್ಜಿ ವಿಚಾರಣೆ ಬಗ್ಗೆಯೂ ಚರ್ಚೆ ನಡೆಸಿದರು. ಬಳಿಕ, ತಿಂಡಿ ಹಾಗೂ ಬಟ್ಟೆಗಳ ಬ್ಯಾಗ್‌ಗಳನ್ನು ತೆಗೆದುಕೊಂಡು ದರ್ಶನ್ ಸೆಲ್‌ಗೆ ಮರಳಿದರು.
ಬೆನ್ನು ನೋವಿನ ಸಮಸ್ಯೆ : ಕೊಲೆ ಆರೋಪಿ ದರ್ಶನ್‌ಗೆ ಜೈಲಿನಲ್ಲಿ ಸೂಕ್ತ ಬೆಡ್ ವ್ಯವಸ್ಥೆ ಇಲ್ಲದೆ ಇರುವುದರಿಂದ ಬೆನ್ನು ನೋವಿನ ಸಮಸ್ಯೆ ಕಾಣಿಸಿಕೊಂಡಿದೆ. ಇತ್ತೀಚೆಗೆ ವೈದ್ಯರು ದರ್ಶನ್ ಆರೋಗ್ಯ ತಪಾಸಣೆ ನಡೆಸಿದ ವೇಳೆ ಬೆನ್ನಿನಲ್ಲಿ ಸಮಸ್ಯೆಯಿದ್ದು, ಸ್ಕಾೃನಿಂಗ್‌ಗೆ ಒಳಪಡಿಸಿ ಶಸ್ತ್ರಚಿಕಿತ್ಸೆ ಮಾಡಬೇಕು ಎಂದಿದ್ದಾರೆ. ಆದರೆ, ದರ್ಶನ್ ನಾನು ಬೆಂಗಳೂರಿಗೆ ಹೋದ ಬಳಿಕ ಸ್ಕಾೃನಿಂಗ್ ಮಾಡಿಸಿಕೊಂಡು, ಸರ್ಜರಿ ಮಾಡಿಸಿಕೊಳ್ಳುವೆ ಹೇಳಿದ್ದಾರೆ. ಸದ್ಯಕ್ಕೆ ಬೆನ್ನು ನೋವಿನ ಮಾತ್ರೆಗಳು ಮಾತ್ರ ಕೊಡಿ ಎಂದು ವೈದ್ಯರ ಬಳಿ ಮನವಿ ಮಾಡಿದ್ದಾರೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net