ದರ್ಶನ್ ಭೇಟಿ ಮಾಡಿದ ಪತ್ನಿ, ಅಪ್ತರು

Published on

ಬಳ್ಳಾರಿ : ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಭೇಟಿಗೆ ಇಲ್ಲಿನ ಕೇಂದ್ರ ಕಾರಾಗೃಹಕ್ಕೆ ಪತ್ನಿ ವಿಜಯಲಕ್ಷ್ಮೀ, ಅಪ್ತರಾದ ಅನುಷಾ ಶೆಟ್ಟಿ , ರೋಹಿತ್, ಸುಶಾಂತ್ ನಾಯ್ಡು, ಗ್ರೇಸ್ ಮರ್ಸಿ ಸೇರಿದಂತೆ ಐವರು ಸೋಮವಾರ ಆಗಮಿಸಿದ್ದರು.
ಪ್ರತಿ ಬಾರಿಯಂತೆ ಈ ಬಾರಿಯು ಕೂಡ ದರ್ಶನ್‌ಗಾಗಿ ಬೇಕರಿಯ ತಿಂಡಿ ತಿನಿಸುಗಳು, ಡ್ರೈ ಫ್ರೂಟ್ಸ್ ಹಾಗೂ ಬಟ್ಟೆಗಳು ಸೇರಿದ ಎರಡು ಬ್ಯಾಗ್‌ಗಳನ್ನು ಪತ್ನಿ ವಿಜಯಲಕ್ಷ್ಮೀ ತಂದಿದ್ದರು. ಜೈಲು ಸಿಬ್ಬಂದಿ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಜೈಲಿನೊಳಗೆ ಪ್ರವೇಶಿಸಲು ಅನುಮತಿ ನೀಡಲಾಯಿತು. ಬಳಿಕ, ದರ್ಶನ್‌ನನ್ನು ಹೈ ಸೆಕ್ಯೂರಿಟಿ ಸೆಲ್‌ನಿಂದ ಕರೆ ತಂದು ಪತ್ನಿ ಜತೆ ಮಾತನಾಡಲು ಸಂದರ್ಶಕರ ಕೊಠಡಿಗೆ ಕಳುಹಿಸಲಾಯಿತು. ಸುಮಾರು ಅರ್ಧ ಗಂಟೆ ಪತ್ನಿ ವಿಜಯಲಕ್ಷ್ಮೀ ಹಾಗೂ ಅಪ್ತರ ಜತೆ ದರ್ಶನ್ ಮಾತುಕತೆ ನಡೆಸಿದರು. ಅಲ್ಲದೆ, ಅ. 8 ರಂದು ನಡೆಯುವ ಜಾಮೀನು ಅರ್ಜಿ ವಿಚಾರಣೆ ಹಾಗೂ ಬೆನ್ನು ನೋವಿನ ಸಮಸ್ಯೆ ಬಗ್ಗೆಯು ಚರ್ಚಿಸಲಾಯಿತು. ಜಾಮೀನು ಸಿಗುವ ವಿಶ್ವಾಸವಿದ್ದು, ಕೆಲವೇ ದಿನಗಳಲ್ಲಿ ಹೊರಗಡೆ ಬರುವಿರಿ ಎಂದು ವಿಜಯಲಕ್ಷ್ಮೀ ದರ್ಶನ್‌ಗೆ ಧೈರ್ಯ ತುಂಬಿದರು ಎಂದು ಮೂಲಗಳು ತಿಳಿಸಿದವು. ಪತ್ನಿ ತಂದಿದ್ದ ಎರಡು ಬ್ಯಾಗ್‌ಗಳನ್ನು ತೆಗೆದುಕೊಂಡು ಮರಳಿ ಹೈ ಸೆಕ್ಯೂರಿಟಿ ಸೆಲ್‌ಗೆ ತೆರಳಿದರು. ದರ್ಶನ್ ವೀಕ್ಷಿಸಿದ ಅಭಿಮಾನಿಗಳು ಜೈ ಡಿ ಬಾಸ್ ಎಂದು ಜೈಲಿನ ಹೊರಗಡೆಯಿಂದ ಘೋಷಣೆ ಕೂಗಿದರು. ಕೆಲ ಅಭಿಮಾನಿಗಳು ಆಟೋಗಳ ಮೇಲೆ ದರ್ಶನ್ ನಟನೆಯ ಸಿನಿಮಾದ ಚಿತ್ರಗಳನ್ನು ಹೆಸರಗಳನ್ನು ಹಾಕಿಸಿಕೊಂಡು ಜೈಲಿನ ಮುಂಭಾಗದಲ್ಲಿ ನಿಲ್ಲಿಸಿ ಅಭಿಮಾನ ತೋರಿದರು. ಒಟ್ಟಾರೆ ಪತ್ನಿ ವಿಜಯಲಕ್ಷ್ಮೀ ಬೆಂಗಳೂರು ಜೈಲಿನಿಂದ ದರ್ಶನ್ ಬಳ್ಳಾರಿ ಜೈಲಿಗೆ ಸ್ಥಳಾಂತರಗೊಂಡ ಬಳಿಕ ಎಂಟನೇ ಬಾರಿಗೆ ಭೇಟಿ ಆಗಮಿಸಿದರು.
ದರ್ಶನ್‌ಗೆ ಕೊಲೆ ಪ್ರಕರಣದ ಪಶ್ಚಾತ್ತಾಪ ಕಾಡುತ್ತಿದೆ, ರಾತ್ರಿ ವೇಳೆ ರೇಣುಕಸ್ವಾಮಿ ಮುಖ ಚಿತ್ರಣ ಕಾಣುಸುತ್ತಿದೆ ಎಂಬುದು ಎಲ್ಲ ಸುಳ್ಳು ಸುದ್ದಿಯಾಗಿದೆ. ಜೈಲಿನ ಭದ್ರತ ಸಿಬ್ಬಂದಿ ಒಂದು ದಿನವೂ ಕೂಡ ದರ್ಶನ್ ಕಿರುಚಿದ ಶಬ್ಧ ಕೇಳಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಸ್ವತಃ ನಾನೇ ದರ್ಶನ್ ಅವರನ್ನು ನೇರವಾಗಿ ಕೇಳಿದ್ದು, ಅಂತಹ ಯಾವುದೇ ಸಮಸ್ಯೆಯಿಲ್ಲ. ಅಲ್ಲದೆ, ಬಳ್ಳಾರಿ ಜೈಲಿನಿಂದ ಬೇರೆ ಜೈಲಿಗೆ ಸ್ಥಳಾಂತರಗೊಳಿಸಿ ಎಂಬುದಾಗಿ ದರ್ಶನ್ ಕೇಳಿಲ್ಲ ಎಂದು ಜೈಲು ಅಧೀಕ್ಷಕಿ ಲತಾ ತಿಳಿಸಿದರು. ಪ್ರತಿ ಬಾರಿ ಪತ್ನಿ ವಿಜಯಲಕ್ಷ್ಮೀ ಜೈಲಿಗೆ ಭೇಟಿ ಮಾಡಿದ ವೇಳೆ ದರ್ಶನ್‌ಗಾಗಿ ವಿವಿಧ ದೇವರ ಹೆಸರಿನ ಪ್ರಸಾದ ತರುವುದು ಸಾಮಾನ್ಯವಾಗಿದೆ. ಮಂತ್ರಾಲಯದ ಅಕ್ಷತೆ, ದೇವಿಯ ಕುಂಕುಮ ಸೇರಿದಂತೆ ತಂದಿದ್ದಾರೆ. ಆದರೆ, ಇಂತಹ ಉಹಾಪೋಹಗಳನ್ನು ನಂಬಬೇಡಿ ಎಂದು ಜೈಲು ಅಧಿಕಾರಿಗಳು ಮಾಹಿತಿ ಹಂಚಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net