ದರ್ಶನ್ ಪುಟ್ಟಣ್ಣಯ್ಯ ಗೆಲುವಿಗೆ ಶ್ರಮಿಸಿ

11-pnp 1
Published on

ಪಾಂಡವಪುರ: ಯಾವುದೇ ಪಕ್ಷದ ಅಭ್ಯರ್ಥಿಗಳು ತೋರಿಸುವ ಹಣದ ಅಮಿಷಗಳಿಗೆ ಬಲಿಯಾಗದೆ ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರ ನಿರ್ಧಾರದಂತೆ ಕಾರ್ಯಕರ್ತರು ರೈತ ಸಂಘ ಬೆಂಬಲಿತ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರ ಗೆಲುವಿಗೆ ಶ್ರಮಿಸಬೇಕು ಎಂದು ಕೆಪಿಸಿಸಿ ಸದಸ್ಯ ಎಚ್.ತ್ಯಾಗರಾಜು ಕರೆ ನೀಡಿದರು.

ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಗೆಲ್ಲುವ ಸಾಮರ್ಥ್ಯವಿದ್ದು, ನಾವು ಬೆಂಬಲಿಸುವ ಅಭ್ಯರ್ಥಿ ಸೋತರೆ ಮೇಲ್ಮಟ್ಟದ ನಾಯಕರಿಗೆ ಉತ್ತರ ಹೇಳಲು ಆಗಲ್ಲ. ಹೀಗಾಗಿ ಕಳೆದ ಬಾರಿ ಚುನಾವಣೆಯಂತೆ ಮೈಮರೆಯದೆ ದರ್ಶನ್ ಪುಟ್ಟಣ್ಣಯ್ಯ ಗೆಲುವಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿ, ಮೇಲುಕೋಟೆ ಕ್ಷೇತ್ರದಲ್ಲಿ ನಡೆಯುತ್ತಿರುವ ಸೇಡು, ದ್ವೇಷದ ರಾಜಕಾರಣ ಕೊನೆಗಾಣಿಸಲು ನಾವೆಲ್ಲರೂ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಬೆಂಬಲಿಸಿ ಗೆಲ್ಲಿಸಬೇಕಾದ ಅನಿವಾರ್ಯತೆ ಇದೆ ಎಂದರು.

ಕಾಂಗ್ರೆಸ್ ಕಾರ್ಯಕರ್ತ ಚೆಲುವರಸಕೊಪ್ಪಲು ದರ್ಶನ್ ಮಾತನಾಡಿ, ಪಕ್ಷಕ್ಕೆ ಈ ಹಿಂದಿನಿಂದಲೂ ಜೆಡಿಎಸ್ ಸಾಂಪ್ರದಾಯಿಕ ವಿರೋಧಿಯಾಗಿದೆ. ನಾವೆಲ್ಲರೂ ಒಗ್ಗಟ್ಟಾಗಿ ಜೆಡಿಎಸ್ ವಿರುದ್ಧ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲದ ನಡುವೆಯೂ ರೈತ ಸಂಘದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಸೋಲು ಕಂಡರು. ಇದನ್ನು ಮರೆಯಲು ಈ ಚುನಾವಣೆಯಲ್ಲಿ ಗೆಲುವು ಸಾಧಿಸಲೇಬೇಕು. ಹೀಗಾಗಿ ಯಾವುದೇ ಹಿಂಜರಿಕೆ ಇಲ್ಲದೆ ರೈತ ಸಂಘ ಬೆಂಬಲಿಸೋಣ ಎಂದರು.

ಕೆ.ಎಸ್.ಪುಟ್ಟಣ್ಣಯ್ಯ ಅವರು ಶಾಸಕರಾಗಿದ್ದಾಗ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ಅಧಿಕಾರ ಅನುಭವಿಸಿದ್ದಾರೆ. ಹೀಗಾಗಿ ಕಾರ್ಯಕರ್ತರು ದರ್ಶನ್ ಗೆಲುವಿಗಾಗಿ ಹೋರಾಟ ಮಾಡಬೇಕಿದೆ ಎಂದು ಕಾಂಗ್ರೆಸ್ ಮುಖಂಡರಾದ ಡಿ.ಕೆ.ದೇವೇಗೌಡ, ರಾಜೇಂದ್ರಸಿಂಗ್ ಬಾಬು ಮತ್ತು ಚಿಕ್ಕಾಡೆ ಕೃಷ್ಣೇಗೌಡ ವಿನಂತಿಸಿದರು.
ಕಾಂಗ್ರೆಸ್ ಮುಖಂಡರಾದ ಎಚ್.ಮಂಜುನಾಥ್, ಟಿಎಪಿಸಿಎಂಎಸ್ ನಿರ್ದೇಶಕ ಚಿಕ್ಕಾಡೆ ಶ್ರೀಕಾಂತ್, ಮಹದೇಶ್ವರಪುರ ದೇವರಾಜು, ಸಿದ್ದಲಿಂಗಯ್ಯ, ಭರತ್ ಪಟೇಲ್, ಶ್ರೀನಿವಾಸ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net