ದರ್ಶನ್ ಪುಟ್ಟಣ್ಣಯ್ಯ ಗೆಲುವಿಗೆ ಪ್ರಾರ್ಥನೆ

16mlk01
Published on

ಪಾಂಡವಪುರ: ‘ದುಡ್ಡಿಗಾಗಿ ದುದ್ದ ಅಲ್ಲ, ಸ್ವಾಭಿಮಾನಕ್ಕೆ ಬದ್ಧ, ಹೋರಾಟಕ್ಕೂ ಸಿದ್ಧ’ ಎಂಬ ಘೋಷವಾಕ್ಯದೊಂದಿಗೆ ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊಳಲು ಗ್ರಾಮದಿಂದ ಆರಂಭವಾದ ಕಾಂಗ್ರೆಸ್, ರೈತಸಂಘದ ಕಾರ್ಯಕರ್ತರ ಎರಡು ದಿನಗಳ ಪಾದಯಾತ್ರೆ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಸ್ಥಾನ ಬಳಿ ಅಂತ್ಯವಾಯಿತು.

ಕಾಂಗ್ರೆಸ್, ರೈತಸಂಘ ಬೆಂಬಲಿತ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ, ಕೆಪಿಸಿಸಿ ಸದಸ್ಯ ಎಚ್.ತ್ಯಾಗರಾಜು, ಪ್ರಧಾನ ಕಾರ್ಯದರ್ಶಿ ಎಚ್.ಎನ್.ರವಿಂದ್ರ ಸೇರಿದಂತೆ ಅನೇಕ ಮುಖಂಡರು ಶನಿವಾರ ಚೆಲುವನಾರಾಯಣಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಿ, ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿದರು.

ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಇದಕ್ಕೂ ಮೊದಲು ಕ್ಷೇತ್ರದಾದ್ಯಂತ ನಡೆಸಿದ ಪಾದಯಾತ್ರೆ ಅನೇಕ ಅನುಭವಗಳನ್ನು ತಂದುಕೊಡುವ ಜತೆಗೆ ಜನತೆ ಅನುಭವಿಸುತ್ತಿರುವ ನೋವು ಮತ್ತು ಸಮಸ್ಯೆಗಳನ್ನು ಅರ್ಥ ಮಾಡಿಸಿತು. ಅದೇ ರೀತಿ ಈ ಪಾದಯಾತ್ರೆ ಮೂಲಕ ದುಡ್ಡಿಗಾಗಿ ದುದ್ದ ಅಲ್ಲ, ಸ್ವಾಭಿಮಾನದ ಕಡೆ ನಮ್ಮ ನಡಿಗೆ ಎಂಬ ಘೋಷವಾಕ್ಯದೊಂದಿಗೆ ಮತದಾರರಿಗೆ ಅರಿವು ಮೂಡಿಸುವ ಕಾರ್ಯ ಮಾಡಲಾಗಿದೆ. ಸುಮಲತಾ ಅಂಬರೀಶ್ ಬೆಂಬಲ ನೀಡುವ ವಿಚಾರ ಅವರಿಗೆ ಬಿಟ್ಟಿದ್ದು, ಕಳೆದ ಲೋಕಸಭಾ ಚುನಾವಣೆಯಲ್ಲಿ ರೈತಸಂಘ ಅವರನ್ನು ಬೆಂಬಲಿಸಿದೆ. ಈ ಚುನಾವಣೆಯಲ್ಲಿ ಅವರು ತೆಗೆದುಕೊಳ್ಳುವ ನಿಲುವನ್ನು ನಾವು ಗೌರವಿಸುತ್ತೇವೆ ಎಂದರು.

ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎನ್.ರವೀಂದ್ರ ಮಾತನಾಡಿ, ಪಕ್ಷದ ಚೌಕಟ್ಟಿನಲ್ಲಿ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದೇವೆಯೇ ಹೊರತು ರೈತಸಂಘ ಮತ್ತು ದರ್ಶನ್ ಪುಟ್ಟಣ್ಣಯ್ಯ ಅವರ ಬಗ್ಗೆ ನಮಗೆ ಯಾವುದೇ ಬೇಸರವಿಲ್ಲ. ಪಕ್ಷ ಟಿಕೆಟ್ ನಿರಾಕರಿಸಿದಾಗ ಆಕಾಂಕ್ಷಿತರು ಅಸಮಾಧಾನಗೊಳ್ಳುವುದು ಸಹಜ. ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರ ಕಾಲದಿಂದಲೂ ಕಾಂಗ್ರೆಸ್ ಮತ್ತು ರೈತಸಂಘದ ಅವಿನಾಭಾವ ಸಂಬಂಧ ಚೆನ್ನಾಗಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಮತ್ತು ರೈತಸಂಘದ ನಾಯಕರು ತಮ್ಮದೇ ಮನೆ ಚುನಾವಣೆ ಎಂಬಂತೆ ಒಗ್ಗಟ್ಟಾಗಿ ಅಬ್ಬರವಿಲ್ಲದೆ ಪ್ರಚಾರ ಮಾಡುತ್ತೇವೆ. ನನ್ನದೇ ಕ್ಷೇತ್ರ ಎಂದು ಮೀಸೆ ತಿರುವುವವರು, ಈ ಕೋಟೆ ನನ್ನದೇ ಎನ್ನುವವರು, ನಾನು ಶಾಶ್ವತವಾಗಿ ಇಲ್ಲೇ ಇರುತ್ತೀನಿ ಎನ್ನುತ್ತಿರುವವರು ಅರ್ಥ ಮಾಡಿಕೊಳ್ಳಬೇಕಾದ ವಿಚಾರ ಎಂದರೆ ಜಗತ್ತನ್ನೇ ಗೆದ್ದರೂ ಬರಿಗೈಯಲ್ಲಿ ಹೋಗುತ್ತಿದ್ದೇನೆ ಎಂದು ಬಿಂಬಿಸಲು ಖಾಲಿ ಕೈಯನ್ನು ಶವಪೆಟ್ಟಿಗೆಯಿಂದ ಹೊರಬಿಟ್ಟಿದ್ದ ಅಲೆಗ್ಸಾಂಡರ್ ಸಾವನ್ನು ಒಮ್ಮೆ ನೆನಪಿಸಿಕೊಳ್ಳಬೇಕಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ 3 ಲಕ್ಷ ಲೀಡ್ ಪಡೆಯುತ್ತೇವೆ, ಇಲ್ಲವಾದರೆ ರಾಜಕೀಯ ನಿವೃತ್ತಿ ಹೊಂದುತ್ತೇವೆಂದು ಹೇಳಿದವರು ಈವರೆಗೂ ನಿವೃತ್ತಿ ಪಡೆದಿಲ್ಲ ಎಂದು ಶಾಸಕ ಸಿ.ಎಸ್.ಪುಟ್ಟರಾಜು ಅವರ ಕಾಲೆಳೆದರು.

ಕೆಪಿಸಿಸಿ ಸದಸ್ಯ ಎಚ್.ತ್ಯಾಗರಾಜು ಮಾತನಾಡಿ, ದಬ್ಬಾಳಿಕೆ ಗುಣ ಹೊಂದಿರುವವರಿಗೆ ಪಾಠ ಕಲಿಸಿ ಒಳ್ಳೆಯ ಗುಣವಿರುವ ವಿದ್ಯಾವಂತರನ್ನು ಈ ಚುನಾವಣೆಯಲ್ಲಿ ಚುನಾಯಿಸಬೇಕಿದೆ. ಕ್ಷೇತ್ರದ ಇತಿಹಾಸದಲ್ಲೇ ಮತದಾರರೇ ಪಾದಯಾತ್ರೆ ನಡೆಸಿ ಜಾಗೃತಿ ಮೂಡಿಸುತ್ತಿರುವುದು ಹೊಸ ರಾಜಕೀಯ ಮನ್ವಂತರಕ್ಕೆ ಸಾಕ್ಷಿಯಾಗಿದೆ. ದರ್ಶನ್ ಪುಟ್ಟಣ್ಣಯ್ಯ ಅವರನ್ನು ಗೆಲ್ಲಿಸುವುದು ಕಾಂಗ್ರೆಸ್ ನಾಯಕರೆಲ್ಲರ ಮುಖ್ಯ ಗುರಿಯಾಗಿದೆ ಎಂದರು.

ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ನಾಗರಾಜು, ಮುಖಂಡರಾದ ಕನಗೋನಹಳ್ಳಿ ಪರಮೇಶ್‌ಗೌಡ, ಎಸ್.ದಯಾನಂದ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net