ದರ್ಶನ್ ಪತ್ನಿ ವಿಜಯಲಕ್ಷ್ಮಿ ಜೈಲಿಗೆ ಭೇಟಿ

Published on

ಬಳ್ಳಾರಿ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ ತೂಗುದೀಪ ಇಲ್ಲಿನ ಕೇಂದ್ರಕಾರಗೃಹಕ್ಕೆ ಗುರುವಾರ ಸಂಜೆ ಭೇಟಿ ನೀಡಿ ಮಾತುಕತೆ ನಡೆಸಿದರು.
ಕೊಲೆಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ ಹಿನ್ನಲೆ ಪತ್ನಿ ವಿಜಯಲಕ್ಷ್ಮಿ ತಂದಿದ್ದ ವಕಾಲತ್ತು ಅರ್ಜಿಗೆ ದರ್ಶನ್ ಸಹಿ ಹಾಕಿದರು. ಸಂದರ್ಶಕರ ಸಮಯಕ್ಕೆ ಮುನ್ನ ಜೈಲಿಗೆ ಆಗಮಿಸಿದ್ದ ವಿಜಯಲಕ್ಷ್ಮಿ ಸಂದರ್ಶಕರ ಕೊಠಡಿಯಲ್ಲಿ ಅರ್ಧಗಂಟೆ ಕಾದು ಕುಳಿತರು. ಬಳಿಕ, ಹೈಸೆಕ್ಯೂರಿಟಿ ಸೆಲ್‌ನಿಂದ ಆಗಮಿಸಿದ ದರ್ಶನ್ ಕಂಡು ಕುಶಲೋಪರಿ ವಿಚಾರಿಸಿದರು ಎನ್ನಲಾಗಿದೆ. ಈ ವೇಳೆ ಚಾರ್ಜ್ ಶೀಟ್‌ನಲ್ಲಿರುವ ಅಂಶ, ವಕೀಲರು ಹೇಳಿರುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಜೈಲುಗಳ ನಿಯಮದಂತೆ ದರ್ಶನ್ ಅವರಿಗೆ ಕೊಡುವ ಸೌಲಭ್ಯವನ್ನು ಪೂರೈಸಿ, ವಾರದಲ್ಲಿ ಕನಿಷ್ಠ ಎರಡು ಬಾರಿಯಾದರೂ ಭೇಟಿಗೆ ಅವಕಾಶ ಕೊಡಿ ಎಂದು ಜೈಲು ಅಧೀಕ್ಷಕಿ ಲತಾ ಅವರಿಗೆ ಮನವಿ ಮಾಡಿದ್ದಾರೆ. ಎರಡನೇ ಬಾರಿಗೆ ಭೇಟಿ ನೀಡಿದ್ದ ವಿಜಯಲಕ್ಷ್ಮಿ ಬ್ಯಾಗ್‌ನಲ್ಲಿ ಬಟ್ಟೆ ಮತ್ತು ಬೇಕರಿ ಐಟಂ, ಡ್ರೈ ಫುಡ್ಸ್ ಗಳನ್ನು ನೀಡಲಾಯಿತು. ಭೇಟಿ ಬಳಿಕ ಸ್ವತಃ ದರ್ಶನ್ ಬ್ಯಾಗ್ ಹಿಡಿದು ಸೈ ಸೆಕ್ಯೂರಿಟಿ ಸೆಲ್‌ಗೆ ಮರಳಿದರು. ಜಾಮೀನಿನ ವಕಾಲತ್ತು ಅರ್ಜಿಗೆ ದರ್ಶನ್ ಸಹಿ ಪಡೆದ ಬಳಿಕ ಜೈಲು ಅಧಿಕಾರಿಗಳ ಸಮಕ್ಷಮದಲ್ಲಿ ನೋಟರಿ ಮಾಡಿಕೊಳ್ಳುವ ಕಾರಣಕ್ಕೆ ವಕೀಲರೊಬ್ಬರು ಪುನಃ ಜೈಲಿಗೆ ಭೇಟಿ ನೀಡಿ ಅಧೀಕ್ಷಕರ ಜತೆ ಚರ್ಚೆ ನಡೆಸಿ ಸಹಿ ಪಡೆದುಕೊಂಡರು. ದರ್ಶನ್ ಇರುವ ಹೈ ಸೆಕ್ಯೂರಿಟಿ ಸೆಲ್‌ಗೆ ಶುಕ್ರವಾರ ಟಿವಿ ಅಳವಡಿಕೆ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿದವು.

ಮಹಿಳೆಯ ಹೈಡ್ರಾಮ : ಬೆಂಗಳೂರಿನಿಂದ ಬಳ್ಳಾರಿ ಜೈಲಿಗೆ ದರ್ಶನ್ ಭೇಟಿ ಮಾಡಲು ಬಂದಿದ್ದ ಮಹಿಳೆಯೊಬ್ಬಳು ಜೈಲಿನ ಮುಂಭಾಗದಲ್ಲಿ ಹೈಡ್ರಾಮ ಮಾಡಿದರು. ದರ್ಶನ್ ವೀಕ್ಷಿಸಲು ಕೇವಲ ಕುಟುಂಬದವರಿಗೆ ಅನುಮತಿ ಹಿನ್ನಲೆ ದರ್ಶನ್ ಮದುವೆಯಾಗುವದಕ್ಕೆ ನಾನು ಸಿದ್ದ ಎಂದು ಜೈಲು ಸಿಬ್ಬಂದಿ ಜತೆ ವಾಗ್ವಾದ ನಡೆಸಿದಳು. ಅಲ್ಲದೆ, ದರ್ಶನ್‌ಗಾಗಿ ಹಣ್ಣು, ತಿಂಡಿ ತಿನಿಸುಗಳನ್ನು ಕೂಡ ಕೈ ಚೀಲದಲ್ಲಿ ತಂದಿದ್ದರು. ಬಳಿಕ, ಪೊಲೀಸ್ ಸಿಬ್ಬಂದಿ ಮಹಿಳೆಯನ್ನು ಮನವೋಲಿಸಿ ವಾಪಸ್ ಕಳುಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net