

ಹಾಸನ: ವರ್ಷಕ್ಕೊಮ್ಮೆ ಬಾಗಿಲು ತೆರೆದು ಭಕ್ತರಿಗೆ ದರ್ಶನ ಕಲ್ಪಿಸುವ ಜಿಲ್ಲೆಯ ಅಧಿದೇವತೆ ಹಾಸನಂಬೆ ತಾಯಿಯ ದೇಗುಲದ ಬಾಗಿಲನ್ನು ಗುರುವಾರ ವಿವಿಧ ಮಠಗಳ ಮಠಾಧೀಶರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹಲವು ಗಣ್ಯರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಬಾಗಿಲು ತೆರೆಯಲಾಯಿತು.
ಆಶ್ವಯುಜ ಮಾಸದ ಹುಣ್ಣಿಮೆಯ ನಂತರದ ಮೊದಲನೇ ಗುರುವಾರ ಮಧ್ಯಾಹ್ನ 12.21ಕ್ಕೆ ಸರಿಯಾಗಿ ಬಾಳೆಕಂದು ಕಡಿದು ದೃಷ್ಟ ತೆಗೆಯುವ ಮೂಲಕ ದೇವಾಲಯದ ಗರ್ಭಗುಡಿಯ ಬಾಗಿಲನ್ನು ತೆರೆಯಲಾಯಿತು. ಈ ವೇಳೆ ದೇವರ ಎಡ-ಬಲದಲ್ಲಿ ಕಳೆದ ವರ್ಷ ಹಚ್ಚಿದ್ದ ದೀಪ ಉರಿಯುತ್ತಿತ್ತಲ್ಲದೆ, ದೇವರನ್ನು ಅಲಂಕರಿಸಿದ್ದ ಹೂವು ಬಾಡಿರಲಿಲ್ಲ, ಈ ದೃಶ್ಯವನ್ನು ನೆರೆದಿದ್ದವರು ಕಣ್ತುಂಬಿಕೊಂಡರು.
ಬೆಳಗ್ಗೆಯಿಂದಲೇ ಅರ್ಚಕರ ತಂಡವು ದೇವಿಯ ಆಭರಣಗಳು ಮತ್ತು ಪೂಜಾ ಸಾಮಗ್ರಿಗಳನ್ನು ದೇವಾಲಯದ ಬಾಗಿಲಲ್ಲಿ ಇಟ್ಟು ಪೂಜಾ ಕೈಂಕರ್ಯಗಳನ್ನು ಆರಂಭಿಸಿದರು. ನಂತರ ಅರಸು ವಂಶಸ್ಥರಾದ ನಂಜರಾಜ ಅರಸು ಅವರನ್ನು ದೇವಾಲಯಕ್ಕೆ ಮಂಗಳವಾದ್ಯದೊಂದಿಗೆ ಕರೆತರಲಾಯಿತು.
ನಂತರ ಅರ್ಚಕರು ಗಣ್ಯರ ಸಮ್ಮುಖದಲ್ಲಿ ಪೂಜೆ ಸಲ್ಲಿಸಿ ದೇವಿಯ ಬಾಗಿಲನ್ನು ತೆರೆದರು. ಇದೇ ವೇಳೆ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಬಾಳೆಕಂದು ಕಡಿದು ದೇವಿಯ ದೃಷ್ಟಿಯು ಜನರ ಮೇಲೆ ಬೀಳದಂತೆ ಶಾಸ್ತ್ರೋಕ್ತವಾಗಿ ನೆರವೇರಿಸಿದರು. ಬಳಿಕ ಗಣ್ಯರ ಸಮ್ಮುಖದಲ್ಲಿ ದೇವಿಯ ಬಾಗಿಲನ್ನು ತೆರೆಯುವ ಮೂಲಕ ದರ್ಶನೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ಬನ್ನಿಯನ್ನು ತೆಗೆದುಕೊಳ್ಳಲು ಮುಗಿಬಿದ್ದರು.
ಈ ಸಂದರ್ಭದಲ್ಲಿ ಆದಿಚುಂಚನಗಿರಿ ಮಠದ ಶ್ರೀನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರಿನ ಸಿದ್ಧಗಂಗಾ ಮಠದ ಕಿರಿಯ ಸ್ವಾಮೀಜಿ ಶ್ರೀಶಿವಸಿದ್ದೇಶ್ವರ ಸ್ವಾಮೀಜಿ, ಆದಿಚುಂಚನಗಿರಿ ಹಾಸನ ಶಾಖ ಮಠದ ಶ್ರೀಶಂಭುನಾಥ ಸ್ವಾಮೀಜಿ, ಶ್ರೀ ಶಾಂತ ಮಲ್ಲಿಕಾರ್ಜನ ಸ್ವಾಮೀಜಿ, ಕೊಡ್ಲಿಪೇಟೆ ಕಿರಿಕೋಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಹೊಳೆನರಸೀಪುರ ತೇಜೂರು ಮಠದ ಶ್ರೀ ಕಲ್ಯಾಣ ಸ್ವಾಮೀಜಿ, ವಿಜಯಪುರ ಮಠ ಶ್ರೀ ವಿಜಯಪುರ ಸ್ವಾಮೀಜಿ, ಕೆ.ಆರ್.ನಗರದ ಶ್ರೀಶಿವಾನಂದಪುರಿ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಶಾಸಕ ಹಾಗೂ ಗೃಹ ನಿರ್ಮಾಣ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್, ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್, ಸಿ.ಎನ್.ಬಾಲಕೃಷ್ಣ, ಸಿಮೆಂಟ್ ಮಂಜು, ಮಹಾನಗರ ಪಾಲಿಕೆಯ ಮೇಯರ್ ಗಿರೀಶ್ ಚನ್ನವೀರಪ್ಪ, ಉಪ ಮೇಯರ್ ಹೇಮಲತಾ ಕಮಲ್ ಕುಮಾರ್, ಜಿಲ್ಲಾಧಿಕಾರಿ ಕೆಎಸ್ ಲತಾ ಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜಿತಾ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಿ.ಆರ್.ಪೂರ್ಣಿಮಾ, ಹಾಸನ ಉಪ ವಿಭಾಗಾಧಿಕಾರಿ ಹಾಗೂ ದೇವಸ್ಥಾನದ ಆಡಳಿತ ಅಧಿಕಾರಿ ಜೆ.ಬಿ.ಮಾರುತಿ, ಹಾಸನ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಟೇಲ್ ಶಿವಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ ಇತರರಿದ್ದರು.
ಭಕ್ತರಿಗೆ ಉತ್ತಮ ಸೌಲಭ್ಯಗಳು: ಈ ಬಾರಿ ಹಿಂದಿಗಿಂತಲೂ ಉತ್ತಮವಾಗಿ ಕುಡಿಯುವ ನೀರು, ವೈದ್ಯಕೀಯ ವ್ಯವಸ್ಥೆ, ಶೌಚಗೃಹ ಮತ್ತು ಅಂಗವಿಕಲರು ಹಾಗೂ ಹಿರಿಯ ನಾಗರಿಕರಿಗೆ ವಿಶೇಷ ದರ್ಶನದ ವ್ಯವಸ್ಥೆ, ದರ್ಶನಕ್ಕೆ ಸರತಿ ಸಾಲಿನ ವ್ಯವಸ್ಥೆ ಮಾಡಲಾಗಿದೆ. ದೇವಾಲಯವನ್ನೂ ಅತ್ಯಂತ ವೈಭವದಿಂದ ಶೃಂಗರಿಸಲಾಗಿದೆ. ದೇಗುಲದ ಮುಂಭಾಗ ಬೃಹದಾಕಾರದ ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗಿದ್ದು, ಆನೆ ಕಲಾಕೃತಿಗಳು ಆಕರ್ಷಿಸುತ್ತಿವೆ.
ಶುಕ್ರವಾರದಿಂದ ದರ್ಶನ ಭಾಗ್ಯ ಪ್ರಾರಂಭವಾಗುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹರಿದುಬರುವ ಸಾಧ್ಯತೆಗಳಿದ್ದು, ಇದರ ಜತೆಗೆ ಗಣ್ಯರ ಸಂಖ್ಯೆಯೂ ಹೆಚ್ಚಾಗುವ ನಿರೀಕ್ಷೆ ಇದೆ.
ದೇವಸ್ಥಾನದಲ್ಲಿ ಭವ್ಯ ಅಲಂಕಾರ: ಹಾಸನಾಂಬೆ ಮತ್ತು ಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ನಗರದೆಲ್ಲೆಡೆ ನೋಡಿದರೂ ವಿದ್ಯುತ್ ಅಲಂಕಾರದಿಂದ ಕಂಗೊಳಿಸುತ್ತಿದೆ. ದೇವಾಲಯಗಳನ್ನು ಹೂವುಗಳಿಂದ ವಿಶಿಷ್ಟವಾಗಿ ಸಿಂಗರಿಸಲಾಗಿದೆ. ಈ ಬಾರಿ ಹಾಸನಾಂಬೆಯ ಉತ್ಸವವನ್ನು ಅದ್ದೂರಿತನಕ್ಕೆ ಆದ್ಯತೆ ನೀಡಲಾಗಿದೆ.ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆವರೆಗೂ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಶನಿವಾರದಿಂದ ದಿನದ 24 ಗಂಟೆಯೂ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ ಅ.23ರಂದು ಬಾಗಿಲು ಮುಚ್ಚುವ ಸಂದರ್ಭ ಸಾರ್ವಜನಿಕರಿಗೆ ದರ್ಶನ ಭಾಗ್ಯ ಇರುವುದಿಲ್ಲ.
ಮೊದಲ ದಿನವೇ ಭಕ್ತರ ದಂಡು: ಹಾಸನಾಂಬೆ ದೇವಾಲಯ ತೆರೆಯುವ ದಿನ ಸಾರ್ವಜನಿಕರ ದರ್ಶನಕ್ಕೆ ಅವಕಾಶವಿಲ್ಲ ಎಂದು ಜಿಲ್ಲಾಡಳಿತದಿಂದ ಪ್ರಕಟಣೆ ಹೊರಡಿಸಿದ್ದರೂ ಮೊದಲ ದಿನವೇ ದರ್ಶನ ಪಡೆಯಬೇಕೆಂಬ ಹಂಬಲದಿಂದ ಭಕ್ತರ ದಂಡೇ ಹರಿದುಬಂದಿತ್ತು. ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅವಕಾಶವಿಲ್ಲ ಎಂದು ಪೊಲೀಸರು ಎಷ್ಟೇ ಮನವರಿಕೆ ಮಾಡಿಕೊಟ್ಟರೂ ಕೆಲ ಭಕ್ತರು ವಾಗ್ವಾದ ನಡೆಸುತ್ತಿದ್ದರೆ, ಇನ್ನೂ ಕೆಲವರು ಅಂಗಲಾಚಿ ಬೇಡಿಕೊಳ್ಳುತ್ತಿದ್ದರು. ವಿಧಿ ಇಲ್ಲದೆ ಪೊಲೀಸರು ಸರತಿ ಸಾಲಿನಲ್ಲಿ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಟ್ಟರು.
ಬಿಗಿ ಪೊಲೀಸ್ ಬಂದೋಬಸ್ತ್: ವರ್ಷಕ್ಕೊಮ್ಮೆ ನಡೆಯುವ ಹಾಸನಂಬೆ ಜಾತ್ರಾ ಮಹೋತ್ಸವದಲ್ಲಿ ಯಾವುದೇ ರೀತಿ ಸಣ್ಣ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜಿತಾ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ದಕ್ಷಿಣ ವಲಯದ ಪೊಲೀಸ್ ಮಹಾ ನಿರ್ದೇಶಕ ಡಾ. ಬೋರಲಿಂಗಯ್ಯ ಮಾರ್ಗದರ್ಶನದಲ್ಲಿ ಸೂಕ್ತ ಭದ್ರತೆ ಒದಗಿಸಲಾಗಿದೆ.
ಐದು ಜನ ಎಎಸ್‌ಪಿ ಸೇರಿದಂತೆ 1,500ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಲಾಗಿದೆ. ಹೊರ ಜಿಲ್ಲೆಗಳಿಂದಲೂ ಪೊಲೀಸರನ್ನು ನಿಯೋಜಿಸಿಕೊಂಡಿದ್ದು, ಮೂರು ಪಾಳಿದಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ. ಟ್ರಾಫಿಕ್ ಸಮಸ್ಯೆ, ಭಕ್ತರು ಸರತಿ ಸಾಲಿನಲ್ಲಿ ತೆರಳಲು ಮತ್ತು ಗಣ್ಯರ ಆಗಮನ ಇನ್ನಿತರ ವ್ಯವಸ್ಥೆಗಳನ್ನು ಕೂಡ ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸಲಾಗಿದೆ.
ಎಲ್ಲರೂ ಸಹಕರಿಸಲು ಮನವಿ: ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ನಾಡಿನ ಅತ್ಯಂತ ಶ್ರೇಷ್ಠವಾದ ದೇವತೆ ಹಾಸನಾಂಬೆ ದರ್ಶನ ಹಾಗೂ ಸಿದ್ದೇಶ್ವರಸ್ವಾಮಿ ಜಾತ್ರಾಮಹೋತ್ಸವ ವಿಧಿವತ್ತಾಗಿ, ಸಂಪ್ರದಾಯಬದ್ಧವಾಗಿ ಹಲವು ಸ್ವಾಮೀಜಿಗಳ ಸಾನಿಧ್ಯದಲ್ಲಿ ಆರಂಭವಾಗಿದೆ. ಎಲ್ಲವೂ ಸುಗಮವಾಗಿ ನಡೆದಿರುವುದು ಸಂತಸದ ವಿಷಯ. ಇದರಿಂದ ನಾಡಿಗೆ ಒಳ್ಳೆಯದಾಗಲಿದೆ, ಜನರಿಗೆ ಒಳಿತಾಗಲಿದೆ ಎಂಬುದು ನನ್ನ ಸದಾಶಯ ಎಂದರು.
ನಾವೆಲ್ಲರೂ ಸೇರಿ ಇಂದು ಚಾಲನೆ ನೀಡಿದ್ದೇವೆ. ನಾಳೆ ಬೆಳಗ್ಗೆ 6ರಿಂದ ಸಂಜೆ 7 ಗಂಟೆವರೆಗೆ ಮಾತ್ರ ದರ್ಶನ ಇರಲಿದೆ. ಭಕ್ತರು ಸರದಿ ಸಾಲಿನಲ್ಲಿ ಬಂದು ದೇವಿಯ ದರ್ಶನ ಪಡೆಯಬೇಕು ಎಂದು ಮನವಿ ಮಾಡಿದರು. ಅ.22ರ ವರೆಗೂ ನೈವೇದ್ಯ, ಮಹಾಮಂಗಳಾರತಿ ಸಮಯ ಹೊರತುಪಡಿಸಿ ಬೆಳಗ್ಗೆಯಿಂದ ನಿರಂತರವಾಗಿ ದೇವಿಯ ದರ್ಶನ ವ್ಯವಸ್ಥೆ ಇರಲಿದೆ ಎಂದು ಹೇಳಿದರು.
ಈ ವರ್ಷದ ಮಹೋತ್ಸವಕ್ಕೆ ನಾಡು, ದೇಶದಿಂದ ಲಕ್ಷಾಂತರ ಭಕ್ತರು ದರ್ಶನಕ್ಕಾಗಿ ಆಗಮಿಸುವ ನಿರೀಕ್ಷೆ ಇದೆ. ಸಂಜೆಯಿಂದಲೇ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಉತ್ಸವದ ಕೊನೆಯ ದಿನದವರೆಗೂ ಸಂಜೆ 6ರಿಂದ ರಾತ್ರಿ 10.30 ವರೆಗೆ, ಹಾಸನಾಂಬೆ ಜಾನಪದ ಗಾಯನ, ನೃತ್ಯ, ಶಾಸ್ತ್ರೀಯ ಸಂಗೀತದ ರಸದೌತಣ ಭಕ್ತರಿಗೆ ಸಿಗಲಿದೆ ಎಂದು ಹೇಳಿದರು.
ಇದರ ಜತೆಗೆ ಹೆಲಿ ಟ್ಯೂರಿಸಂ, ಫಲಪುಷ್ಪ ಹಾಗೂ ವಸ್ತು ಪ್ರದರ್ಶನ ಇರಲಿದ್ದು, ದೇವಿಯ ದರ್ಶನ ಜತೆಗೆ ವಿಶೇಷ ಮನರಂಜನೆಯನ್ನೂ ಪಡೆಯಬಹುದು, ಹಾಸನ ಭೇಟಿ ಬರುವವರ ನೆನಪಲ್ಲಿ ಉಳಿಯಬೇಕು. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಬಂದ ಜನರು ನೆಮ್ಮದಿ ಸಂತೊಷದಿಂದ ದೇವಿ ದರ್ಶನ, ಮನರಂಜನೆ ಪಡೆದು ಹೋಗಲಿ, ಇದಕ್ಕೆ ಅವಕಾಶ ಮಾಡಿಕೊಡೋಣ ಎಂದು ಒಕ್ಕೊರಲಿನಿಂದ ತೀರ್ಮಾನ ಮಾಡಿದ್ದೇವೆ ಎಂದರು.
ಈ ಬಾರಿಗೆ ಗಣ್ಯರ ಜತೆಗೆ ಸಾಮಾನ್ಯ ಭಕ್ತರಿಗೂ ಮೊದಲ ಆದ್ಯತೆ ಸಿಗಬೇಕು ಎಂಬುದು ನಮ್ಮೆಲ್ಲರ ಆಶಯ.ದೂರದಿಂದ ಬಂದಿರುವವರಿಗೆ ಹೆಚ್ಚಿನ ಆದ್ಯತೆ ಸಿಗಬೇಕು. ಗಣ್ಯರಿಗೆ ಬೆಳಗ್ಗೆ 10.30ರಿಂದ ಮಧ್ಯಾಹ್ನ 12 ವರೆಗೆ ಮಾತ್ರ ದರ್ಶನ ಇರಲಿದೆ. ಅವರನ್ನು ಪ್ರವಾಸಿ ಮಂದಿರದಿಂದ ಜಿಲ್ಲಾಡಳಿತದ ವಾಹನದಲ್ಲೇ ಪಿಕಪ್-ಡ್ರಾಪ್ ಮಾಡಲಾಗುವುದು, ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಕ್ಷೇತ್ರದ ಮತದಾರರಿಗಾಗಿ 5 ಲಕ್ಷದ ಟಿಕೆಟ್ ಖರೀದಿ
ನನ್ನ ಕ್ಷೇತ್ರದ ಜನರೂ ಪಾಸ್ ಕೇಳಿದರು. ಅಂಥವರಿಗೆ ನಾನೇ 5 ಲಕ್ಷ ರೂ. ಪೇಮೆಂಟ್ ಮಾಡಿ ಟಿಕೆಟ್ ಕೊಡಿಸಿದ್ದೇನೆ. ನಾವು ಜವಾಬ್ದಾರಿ ಸ್ಥಾನದಲ್ಲಿರುವವರು, ಸಾರ್ವಜನಿಕರ ಹಿತ ಮರೆಯಬಾರದು. ಜನ ಖುಷಿಯಿಂದ ದರ್ಶನ ಮಾಡಿ ಹೋಗಬೇಕು, ಹಾಸನಾಂಬೆ ಉತ್ಸವ ಸುಗಮವಾಗಿ ನಡೆಯಬೇಕು, ಯಾವುದೇ ಅಹಿತಕರ ಘಟನೆ ನಡೆಯಬಾರದು. ಎಲ್ಲರೂ ಸಹಕಾರ ಕೊಡಿ, ಸಣ್ಣಪುಟ್ಟ ನ್ಯೂನ್ಯತೆ ಇದ್ದರೆ ಕ್ಷಮಿಸಿ ಎಂದರು.