ದರಸಗುಪ್ಪೆಯಲ್ಲಿ ಕನ್ನಡ ಸಾಹಿತ್ಯ ರಥಕ್ಕೆ ಸ್ವಾಗತ

SRP_26-01jpj
Published on

 ಶ್ರೀರಂಗಪಟ್ಟಣ : ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಜಾಗೃತಿ ಮೂಡಿಸಲು ಜಿಲ್ಲಾದ್ಯಂತ ಸಂಚರಿಸುತ್ತಿರುವ ಸಾಹಿತ್ಯ ರಥವನ್ನು ತಾಲೂಕು ಆಡಳಿತ, ತಾಲೂಕು ಕಸಾಪ ಹಾಗೂ ಕನ್ನಡಾಭಿಮಾನಿಗಳು ಮಂಗಳವಾರ ಸ್ವಾಗತಿಸಿದರು.

ಪಾಂಡವಪುರ ಕ್ಷೇತ್ರದಿಂದ ಆಗಮಿಸಿದ ಕನ್ನಡದ ರಥವನ್ನು ತಾಲೂಕಿನ ಗಡಿಗ್ರಾಮ ದರಸಗುಪ್ಪೆ ಗ್ರಾಮದಲ್ಲಿ ಬ್ಯಾಂಡ್ ವಾದನ ಹಾಗೂ ಕನ್ನಡ ಗೀತೆಗಳೊಂದಿಗೆ ಪುಷ್ಪಾರ್ಚನೆ ಮಾಡಿ ಬರಮಾಡಿಕೊಂಡಿದ್ದು ವಿಶೇಷವಾಗಿತ್ತು. ತಹಸೀಲ್ದಾರ್ ಪರಶುರಾಮ ಸತ್ತಿಗೇರಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೇಣು, ಬಿಇಒ ಮಹೇಶ್, ಕಸಾಪ ತಾಲೂಕು ಅಧ್ಯಕ್ಷ ಸಿದ್ದಲಿಂಗು ಹಾಗೂ ದಸರಗುಪ್ಪೆ ಗ್ರಾಪಂ ಅಧ್ಯಕ್ಷ ಮುರಳಿ ಅವರ ನೇತೃತ್ವದಲ್ಲಿ ಕನ್ನಡದ ಕಟ್ಟಾಳುಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘಟನೆಗಳ ಹೋರಾಟಗಾರರು ತಾಯಿ ಭುವನೇಶ್ವರಿದೇವಿಗೆ ಪೂಜೆ ಅರ್ಪಿಸಿದರು. ಶಾಲಾ ಮಕ್ಕಳು ಸೇರಿದಂತೆ ಕ್ಕಿಕ್ಕಿರಿದು ನೆರೆದಿದ್ದ ಗ್ರಾಮದ ಜನರು ಕನ್ನಡಾಂಬೆಗೆ ಜಯಕಾರ ಹಾಕಿದರು. ಅರುಣೋದಯ ಕಲಾತಂಡದ ಮಂಜುಳಾ ನೇತೃತ್ವದ ಕಲಾವಿದರು ಕನ್ನಡ ಗೀತೆಗಳನ್ನು ಹಾಡಿ ಕುಣಿದು ನೆರೆದವರನ್ನು ರಂಜಿಸಿದರು. ಈ ವೇಳೆ ನಾಡಧ್ವಜಗಳು ರಾರಾಜಿಸಿದವು.

ಸ್ಪಷ್ಟವಾಗಿ ಮಾತನಾಡೋಣ: ತಹಸೀಲ್ದಾರ್ ಪರಶುರಾಮ ಸತ್ತಿಗೇರಿ ಮಾತನಾಡಿ, 30 ವರ್ಷಗಳ ಬಳಿಕ ಸಕ್ಕರೆಯ ನಾಡು ಮಂಡ್ಯಕ್ಕೆ 87ನೇ ಸಮ್ಮೇಳನ ನಡೆಸುವ ಅವಕಾಶ ದೊರಕಿದೆ. ಭಾಷೆಗೆ ಗೌರವ ತೋರಲು ನಾವೆಲ್ಲರೂ ಸ್ಪಷ್ಟವಾಗಿ ಕನ್ನಡದಲ್ಲಿ ಮಾತನಾಡೋಣ ಎಂದರು. ಇದು ಅಪ್ಪಟ ದೇಸಿ ಸಂಭ್ರಮದ ಸಮ್ಮೇಳನವಾಗಲು ಎಲ್ಲರೂ ಸಹಕಾರ ನೀಡಬೇಕು. ನಿತ್ಯವೂ ಕನ್ನಡ ಭಾಷೆ ಬಳಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net