

ಚಾಮರಾಜನಗರ: ‘ಭಾರತದ ನಯಾಗರ’ ಎಂದೇ ಪ್ರಖ್ಯಾತಿಯಾಗಿರುವ ಹೊಗೇನಕಲ್‌ನಲ್ಲಿ ಕರ್ನಾಟಕ ಭಾಗದ ತೆಪ್ಪಗಳು ದರ ತಾರತಮ್ಯದ ಸುಳಿಗೆ ಸಿಲುಕೊಂಡಿವೆ.
ದಕ್ಷಿಣ ಭಾರತದಲ್ಲಿ ತಮಿಳುನಾಡಿನ ಧರ್ಮಪುರಿ ಜಿಲ್ಲೆ ಮತ್ತು ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಗಡಿಯಲ್ಲಿ ಹೊಗೇನಕಲ್ ಇದೆ. ಬಂಡೆಗಲ್ಲುಗಳ ನಡುವೆ ಧುಮ್ಮಿಕ್ಕಿ ಹರಿಯುವ ಕಾವೇರಿ ನದಿಯಲ್ಲಿ ಪ್ರವಾಸಿಗರಿಗೆ ತೆಪ್ಪಗಳ ಮೂಲಕ ಬೋಟಿಂಗ್ (ಬೆಳಗ್ಗೆ 6ರಿಂದ ಸಂಜೆ 6 ಗಂಟೆ) ಸೌಲಭ್ಯವಿದೆ. ಎರಡೂ ರಾಜ್ಯಗಳ ಬೋಟಿಂಗ್ ಚಾಲಕರಲ್ಲಿ ತಮಿಳುನಾಡಿನವರಿಗೆ ಅಧಿಕ, ಕರ್ನಾಟಕದವರಿಗೆ ಕಡಿಮೆ ಸಂಪಾದನೆಯಾಗುತ್ತಿದೆ.
ಎಷ್ಟು ಹಣ ನಿಗದಿ?: 1 ತೆಪ್ಪದಲ್ಲಿ ನಾಲ್ವರನ್ನು 1 ಗಂಟೆ ಸುತ್ತಾಡಿಸಲಾಗುತ್ತದೆ. ತಮಿಳುನಾಡು ಭಾಗದ ಪ್ರವಾಸಿಗರಿಗೆ ಈ ರೀತಿ ಬೋಟಿಂಗ್ ಮಾಡಲು ಒಟ್ಟು 1500 ರೂ. ದರ ನಿಗದಿ ಮಾಡಲಾಗಿದೆ. ಇದರಲ್ಲಿ ಅವರು ಅಲ್ಲಿನ ಅರಣ್ಯ ಇಲಾಖೆಗೆ 150 ರೂ. ಶುಲ್ಕ ಕಟ್ಟಬೇಕು. ಉಳಿದ 1,350 ರೂ.ಗಳನ್ನು ಚಾಲಕರು ಇಟ್ಟುಕೊಳ್ಳುತ್ತಾರೆ.
ಕರ್ನಾಟಕದ ಹೊಗೇನಕಲ್ ಭಾಗದಲ್ಲಿ ಬೋಟಿಂಗ್ ಮಾಡಲು 800 ರೂ. ದರ ನಿಗದಿಯಾಗಿದೆ. ಇದರಲ್ಲಿ 200 ರೂ.ಗಳನ್ನು ಅರಣ್ಯ ಇಲಾಖೆಗೆ ಚಾಲಕರು ಕಟ್ಟುತ್ತಾರೆ. ಉಳಿದ 600 ರೂ. ಮಾತ್ರ ಚಾಲಕರಿಗೆ ಸೇರುತ್ತಿದೆ. ಹೊಗೇನಕಲ್‌ನಲ್ಲಿ ಬೋಟಿಂಗ್ ಕೆಲಸದಲ್ಲಿ 300 ಜನರು ತೊಡಗಿಕೊಂಡಿದ್ದಾರೆ. ಹನೂರು ತಹಸೀಲ್ದಾರ್ ಬಳಿ ದಾಖಲೆಗಳನ್ನು ನೀಡಿ, ಗುರುತಿನ ಚೀಟಿಯನ್ನು ಪಡೆದುಕೊಂಡು ಬೋಟ್‌ಮ್ಯಾನ್ ಕೆಲಸ ಮಾಡುತ್ತಿದ್ದಾರೆ. 300 ಜನರಲ್ಲಿ 150 ಬೋಟ್‌ಮ್ಯಾನ್‌ಗಳು ಒಂದು ದಿನ ಬಳಿಕ ಉಳಿದ 150 ಬೋಟ್‌ಮ್ಯಾನ್‌ಗಳು ಮತ್ತೊಂದು ದಿನ ಕೆಲಸ ಹಂಚಿಕೊಂಡು ದುಡಿಯುತ್ತಿದ್ದಾರೆ.
ಬೋಟ್‌ಮ್ಯಾನ್ ವೃತ್ತಿಯೇ ಆಧಾರ:
ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಗೆ ಬರುವ ಹೊಗೇನಕಲ್‌ನ ಸುತ್ತಮುತ್ತಲ ಪ್ರದೇಶ ಅರಣ್ಯದಿಂದ ಕೂಡಿದೆ. ಕಾವೇರಿ ನದಿ ಹರಿದರೂ ಕೃಷಿಗೆ ನೀರಾವರಿ ಸೌಲಭ್ಯವಿಲ್ಲ, ಅಷ್ಟೇ ಯಾಕೆ, ಕುಡಿಯುವ ನೀರಿಗೂ ಬೋರ್‌ವೆಲ್ ಅನ್ನೇ ಆಶ್ರಯಿಸಬೇಕಾಗಿದೆ. ಹೀಗಾಗಿ ಕೃಷಿಯನ್ನು ಪ್ರಧಾನ ವೃತ್ತಿಯನ್ನಾಗಿಸಿಕೊಳ್ಳಲು ರೈತರಿಗೆ ಸವಾಲು ಎದುರಾಗಿದೆ. ಪ್ರವಾಸೋದ್ಯಮಕ್ಕೆ ಹೆಸರಾಗಿರುವ ಹೊಗೇನಕಲ್‌ನಲ್ಲಿ ಪ್ರವಾಸಿಗರನ್ನು ಕೂರಿಸಿಕೊಂಡು ತೆಪ್ಪ ಓಡಿಸಿ ಬದುಕು ಕಟ್ಟಿಕೊಳ್ಳಲಾಗುತ್ತಿದೆ. ಪದವಿ ಓದಿರುವ ಒಂದಿಬ್ಬರು ಯುವಕರು ನಗರ ಪ್ರದೇಶಕ್ಕೆ ತೆರಳದೆ ಇಲ್ಲೇ ಇದ್ದುಕೊಂಡು ಬೋಟ್‌ಮ್ಯಾನ್ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ತಮಿಳುನಾಡು ಭಾಗದಲ್ಲಿ ಬೋಟಿಂಗ್‌ಗೆ ನಿಗದಿ ಮಾಡಿರುವ ದರವನ್ನೇ ಈ ಭಾಗಕ್ಕೂ ನಿಗದಿ ಮಾಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ.
ಹಲವು ಬಾರಿ ಮನವಿ ಸಲ್ಲಿಕೆ:
ಹೊಗೇನಕಲ್‌ನ ಬೋಟ್‌ಮ್ಯಾನ್‌ಗಳು ತಮಿಳುನಾಡಿನ ದರದಂತೆ ಕರ್ನಾಟಕದಲ್ಲೂ ದರ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿ ಹಲವು ಬಾರಿ ಮನವಿ ಸಲ್ಲಿಸಿ ನಿರಾಶರಾಗಿದ್ದಾರೆ. ಜಿಲ್ಲಾಧಿಕಾರಿಗಳು, ಕಾವೇರಿ ವನ್ಯಜೀವಿಧಾಮದ ಡಿಸಿಎ್ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಈವರೆಗೂ ಪ್ರಯೋಜವಾಗಿಲ್ಲ ಎಂಬುದು ಬೇಸರದ ಸಂಗತಿ. ಈಗಲೂ ಸಹ ದರ ಹೆಚ್ಚಳವಾಗಬಹುದೆಂಬ ನಿರೀಕ್ಷೆಯಲ್ಲಿ ದಿನ ಕಳೆಯುತ್ತಿರುವ ಬೋಟ್‌ಮ್ಯಾನ್‌ಗಳು ಪಕ್ಕದಲ್ಲೇ ಸಂಚರಿಸುವ ತಮಿಳುನಾಡಿನ ಬೋಟ್‌ಗಳು ತಮಗಿಂತಲೂ ಅಧಿಕ ದರ ತೆಗೆದುಕೊಳ್ಳುತ್ತಿರುವುದನ್ನು ನೋಡಿ ಅಸಹಾಯಕತೆಯಿಂದ ಸುಮ್ಮನಿರಬೇಕಾಗಿದೆ.
ಉದ್ಯೋಗ ಕೊಟ್ಟಿರುವ ಹೊಗೇನಕಲ್ ಪ್ರವಾಸೋದ್ಯಮ:
ಚಾಮರಾಜನಗರ ಜಿಲ್ಲೆ ಪ್ರವಾಸಿಗರ ಪಾಲಿನ ಸ್ವರ್ಗ. ಧಾರ್ಮಿಕ ಕೇಂದ್ರಗಳು, ಪ್ರಾಕೃತಿಕ ಸಂಪತ್ತು ಭಕ್ತರನ್ನು ಮತ್ತು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಪ್ರವಾಸೋದ್ಯಮ ಸ್ಥಳಗಳಲ್ಲಿ ಸ್ಥಳೀಯರಿಗೆ ನಿರೀಕ್ಷಿತ ಮಟ್ಟದಲ್ಲಿ ಅಲ್ಲದಿದ್ದರೂ ಉದ್ಯೋಗ ಸಿಕ್ಕಿವೆ. ಇದರಲ್ಲಿ ಹೊಗೇನಕಲ್ ಪಾಲು ಇದೆ. ನದಿಯಲ್ಲಿ ಬೋಟಿಂಗ್ ಮಾಡುವ 300 ಜನರಿಗೆ ಉದ್ಯೋಗ ಸಿಕ್ಕಿರುವುದು ದೊಡ್ಡ ವಿಚಾರವೇ. ಅಲ್ಲದೇ, ಹೊಗೇನಕಲ್‌ನಲ್ಲಿ ಮೀನೂಟ ತುಂಬಾ ಪ್ರಸಿದ್ಧಿ. ಇದು ಈ ಭಾಗದ ಹೆಂಗಸರ ಕಸುಬು. ಸುಟ್ಟ ಮೀನುಗಳನ್ನು ತಿನ್ನಲು ಬಲು ರುಚಿಯಾಗಿರುತ್ತದೆ. ಬೋಟಿಂಗ್‌ಗೆ ಬರುವ ಪ್ರವಾಸಿಗರು ಮೀನೂಟ ಅಚ್ಚುಮೆಚ್ಚು. ಮತ್ತೊಂದೆಡೆ ತೆಪ್ಪದಲ್ಲಿ ತಿಂಡಿಗಳನ್ನು ಇಟ್ಟು ಮಾರಾಟ ಮಾಡಲಾಗುತ್ತದೆ. ಎಣ್ಣೆ ಮಸಾಜ್ ಮಾಡುವ ಕೆಲಸ ಮಾಡುವವರೂ ಇಲ್ಲಿದ್ದಾರೆ.
ಹೊಗೇನಕಲ್‌ಗೆ ಪ್ರವಾಸಿಗರ ಭೇಟಿ: ಹೊಗೇನಕಲ್ ಾಲ್ಸ್‌ಗೆ ಪ್ರವಾಸಿಗರ ದಂಡೇ ಹರಿದುಬರುತ್ತದೆ. ತಿಂಗಳಿಗೆ ಕಡಿಮೆ ಎಂದರೂ 2 ಸಾವಿರ ಪ್ರವಾಸಿಗರು ಭೇಟಿ ನೀಡುತ್ತಾರೆ. ಜಿಲ್ಲಾ ಪ್ರವಾಸೋದ್ಯಮ ಇಲಾಖೆ ನೀಡಿರುವ 2024ರ ಆಗಸ್ಟ್‌ನ ಮಾಹಿತಿ ಪ್ರಕಾರ, 2781 ಪ್ರವಾಸಿಗರು (150 ವಿದೇಶಿ ಪ್ರವಾಸಿಗರು) ಹೊಗೇನಕಲ್‌ಗೆ ಆಗಮಿಸಿದ್ದರು. ಕಾವೇರಿ ನದಿ ನೀರು ಹರಿಯುವ ಪ್ರಮಾಣ ಹೆಚ್ಚಾದರೆ, ಮುನ್ನೆಚ್ಚರಿಕೆ ಕ್ರಮವಾಗಿ ಬೋಟಿಂಗ್ ಬಂದ್ ಮಾಡಲಾಗುತ್ತದೆ. ಇತ್ತೀಚೆಗೆ ನೀರು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಬೋಟಿಂಗ್ ಸ್ಥಗಿತಗೊಳಿಸಿ ಮರು ಆರಂಭಿಸಲಾಯಿತು.
ಹೊಗೇನಕಲ್‌ನಲ್ಲಿ ತಮಿಳುನಾಡಿನ ಭಾಗದಲ್ಲಿ ಬೋಟಿಂಗ್ ಮಾಡಲು ನಿಗದಿ ಪಡಿಸಿರುವಂತೆಯೇ ಕರ್ನಾಟಕ ಭಾಗದಲ್ಲೂ ದರ ನಿಗದಿ ಮಾಡಬೇಕೆಂದು ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ ಈವರೆಗೂ ದರ ಪರಿಷ್ಕರಣೆಯಾಗಿಲ್ಲ. ಹೆಸರು ಹೇಳಲಿಚ್ಛಿಸದ ಬೋಟ್‌ಮ್ಯಾನ್ ಹೊಗೇನಕಲ್‌ನಲ್ಲಿ ಬೋಟಿಂಗ್‌ನ ದರ ಪರಿಷ್ಕರಣೆ ಮಾಡಬೇಕೆಂಬ ಮನವಿಯನ್ನು ಕೇಂದ್ರ ಕಚೇರಿಗೆ ಕಳುಹಿಸಲಾಗಿದೆ. ಅಲ್ಲಿಂದ ಇನ್ನೂ ಸೂಚನೆ ಬಂದಿಲ್ಲ. ಸುರೇಂದ್ರ, ಡಿಸಿಎ್, ಕಾವೇರಿ ವನ್ಯಜೀವಿಧಾಮ