ದಯನೀಯ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದ ಬಾಲಕ, ವೃದ್ಧೆ ರಕ್ಷಣೆ

mysore
Published on

ಮೈಸೂರು: ಭಿಕ್ಷೆ ಬೇಡಿ ದಯನೀಯ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದ 4 ವರ್ಷದ ಬಾಲಕ ದರ್ಶನ್ ಹಾಗೂ 90 ವಯಸ್ಸಿನ ವೃದ್ಧೆ ಕೃಷ್ಣಮ್ಮ ಅವರನ್ನು ಶುಕ್ರವಾರ ರಕ್ಷಣೆ ಮಾಡಿದ್ದು, ಅವರಿಗೆ ಪುನರ್ವಸತಿ ಕಲ್ಪಿಸಲಾಗಿದೆ.

ನಗರದ ಯಲ್ಲಮ್ಮ ಕಾಲನಿಯಲ್ಲಿ ನರ್ಮ್ ಯೋಜನೆ ವಸತಿಗೃಹದ ಬ್ಲಾಕ್ 6ರ ನಾಲ್ಕನೇ ಮಹಡಿಯ ನಿವಾಸದಲ್ಲಿ ಇಬ್ಬರು ಅತ್ಯಂಯ ಕರುಣಾಜನಕ ಸ್ಥಿತಿಯಲ್ಲಿ ವಾಸಿಸುತ್ತಿದ್ದರು.

ಜಗದ ಪರಿವೇ ಇಲ್ಲದ ಬಾಲಕ ನಿತ್ಯ ಭಿಕ್ಷೆ ಬೇಡಿ ತನ್ನ ಅಜ್ಜಿಗೆ ಊಟ ನೀಡುತ್ತಿದ್ದ. ನೀರಿಲ್ಲದ ದುಸ್ಥ್ಥಿತಿ, ಸ್ವಚ್ಛತೆಯಿಲ್ಲದ ಕೋಣೆಗಳು, ಸ್ನಾನ ಮಾಡಲಾಗದ ಕಷ್ಟಕರ ಸ್ಥಿತಿ, ವಾಸಿಸಲು, ಬಳಸಲು ಯಾವುದೇ ಅಗತ್ಯ ವಸ್ತುಗಳೂ ಇಲ್ಲಿರಲಿಲ್ಲ. ಅತ್ಯಂತ ಶೋಚನೀಯ ವಾತಾವರಣದಲ್ಲಿ ಪುಟ್ಟಕಂದ, ಅಜ್ಜಿ ಜೀವನ ಸಾಗಿಸುತ್ತಿದ್ದರು.

ಮಾಹಿತಿ ಮೇರೆಗೆ ಡಾನ್ ಬೋಸ್ಕೊ ಮಕ್ಕಳಾಲಯದ ಸಿಬ್ಬಂದಿ, ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ, ಮಕ್ಕಳ ಕಲ್ಯಾಣ ಸಮಿತಿ, ಮಕ್ಕಳ ವಿಶೇಷ ಪೊಲೀಸ್ ಘಟಕದ ಅಧಿಕಾರಿಗಳು ಬಾಲಕ, ವೃದ್ಧೆಯನ್ನು ರಕ್ಷಣೆ ಮಾಡಿ ಸರ್ಕಾರದ ಆಶ್ರಮಕ್ಕೆ ಸೇರಿಸಿದ್ದಾರೆ.

ವೃದ್ಧೆ ಮೂಲತಃ ಕೇರಳದವರು. ಪತಿ ತಂಗಪ್ಪ. ಇವರ ಮಗಳು ದಿ.ಬೇಬಿ ಮತ್ತು ಆಕೆಯ ಪತಿ ದಿ.ದಿನೇಶ್ ದಂಪತಿ ಮಕ್ಕಳಾದ ಸಿಂಧು ಹಾಗೂ ಬಿಂದು ಕುರಿಮಂಡಿ ನಿವಾಸಿಗಳು.

ಸಿಂಧುವಿನ ದ್ವಿತೀಯ ಪತಿ ಬಾಥನ್ ಅವರ ಮಕ್ಕಳಾದ ಸೋನು ಸರ್ಕಾರಿ ಬಾಲಕಿಯರ ಬಾಲಮಂದಿರದಲ್ಲಿ ಇದ್ದಾಳೆ. ಶೈಲಜಾ, ರಾಜು ಸುಮಾರು 2 ತಿಂಗಳಿಂದ ಕಾಣೆಯಾಗಿದ್ದಾರೆ.

ಮತ್ತೊಬ್ಬ ಪುತ್ರ ದರ್ಶನ್ 8 ತಿಂಗಳಿರುವಾಗ ಈತನ ತಾಯಿ ಈತನನ್ನು ಹಾಗೂ ವೃದ್ಧೆಯನ್ನು ಬಿಟ್ಟು ಹೋಗಿದ್ದಾರೆ. ಅಂದಿನಿಂದ ಈ ವೃದ್ಧೆ ಮರಿಮೊಮ್ಮಕ್ಕಳನ್ನು ಭಿಕ್ಷೆ ಬೇಡಿ ಸಾಕಿದ್ದಾರೆ.

ಇವರು ರಾಜೇಂದ್ರನಗರದ ಸಾರ್ವಜನಿಕ ಶೌಚಗೃಹದಲ್ಲಿ ಭಿಕ್ಷೆ ಬೇಡುತ್ತಾ ವಾಸಿಸುತ್ತಿದ್ದರು. ಇದನ್ನು ಕಂಡ ಸಾರ್ವಜನಿಕರು ಇವರನ್ನು ಯಲ್ಲಮ್ಮ ಕಾಲನಿಯ ನರ್ಮ್ ಯೋಜನೆಯ ಸರ್ಕಾರಿ ಕಟ್ಟಡದಲ್ಲಿ ವಾಸಿಸಲು ಸೌಕರ್ಯ ಮಾಡಿಕೊಟ್ಟಿದ್ದಾರೆ. ಇಲ್ಲಿ ಶೋಚನೀಯವಾಗಿ ಬದುಕು ಸಾಗಿಸುತ್ತಿದ್ದರು.

ಶೇ.70ರಷ್ಟು ಕಣ್ಣು ಕಾಣದ ಅಜ್ಜಿಗೆ ಮೊಮ್ಮಗ ಭಿಕ್ಷೆ ಬೇಡಿ ಊಟ ತಂದುಕೊಡದಿದ್ದರೆ ಆ ದಿನ ಉಪವಾಸವೇ ಗತಿ. ಅಲ್ಲದೆ ಆ ಮನೆಯ ಸ್ಥಿತಿ ಕಸದ ತಿಪ್ಪೆಯಂತಿದೆ, ಅನೈರ್ಮಲ್ಯ ತಾಂಡವವಾಡುತ್ತಿದೆ.

ಇಂತಹ ಕರುಣಾಜನಕ ಸ್ಥಿತಿಯಲ್ಲಿದ್ದರೂ ಸಾರ್ವಜನಿಕರು ನೆರವಿಗೆ ಧಾವಿಸಿಲ್ಲ. ಸಂಬಂಧಪಟ್ಟ ಅಧಿಕಾರಿಗೆ ಮಾಹಿತಿ ನೀಡಿ ಪುನರ್ವಸತಿ ಕಲ್ಪಿಸಿಕೊಡುವ ಕೆಲಸವನ್ನೂ ಮಾಡಿಲ್ಲ. ಜನಪ್ರತಿನಿಧಿಗಳೆನಿಸಿಕೊಂಡವರು, ನಾಯಕರು ಎನಿಸಿಕೊಂಡವರು ಇತ್ತ ನೋಡಿಲ್ಲ ಎಂಬುದು ಕಳವಳಕಾರಿ ಸಂಗತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net