ದಮ್- ತಾಕತ್ 23ರ ಚುನಾವಣೆ ತೀರ್ಮಾನ ಆಗಲಿ

BKT-11-11
Published on

ಬಾಗಲಕೋಟೆ: ಜನಸ್ಪಂದನ ಕಾರ್ಯಕ್ರಮದಲ್ಲಿ ಪೈಪೋಟಿಗೆ ಬಿದ್ದವರಂತೆ ಸಿದ್ದರಾಮಯ್ಯ ಅವರ ಮೇಲೆ ಮುಗಿಬಿದ್ದು ರಣವಿಳ್ಯೆ ನೀಡಿದ್ದ ಬಿಜೆಪಿ ಮುಖಂಡರಿಗೆ ಶನಿವಾರ ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರದಲ್ಲಿ ಮಾಜಿ ಸಿಎಂ ಸಹ ಅಷ್ಟೆ ಮೊನಚಾದ ಮಾತುಗಳಿಂದ ಟಕ್ಕರ್ ಕೊಟ್ಟಿದ್ದಾರೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಸಿ.ಟಿ.ರವಿ, ಡಾ.ಸುಧಾಕರ ಅವರ ಪ್ರತಿ ಮಾತಿಗೂ ಸಿದ್ದರಾಮಯ್ಯ ಅಷ್ಟೆ ಖಡಕ್ಕಾಗಿ ಪ್ರತ್ಯುತ್ತರ ನೀಡಿದ್ದಲ್ಲದ್ದ ಪ್ರತಿಸವಾಲ್ ಗಳನ್ನು ಎಸೆದಿದ್ದಾರೆ.
ದಮ್, ತಾಕತ್ ಇದ್ದರೆ ಬಿಜೆಪಿಯ ಜನಸ್ಪಂದನ ನಿಲ್ಲಿಸಲಿ ಎಂದು ಸವಾಲ್ ಹಾಕಿದ್ದ ಸಿಎಂ ಬೊಮ್ಮಾಯಿ ಹೇಳಿಕೆ ಪ್ರಸ್ತಾಪಿಸಿದ ಸಿದ್ದರಾಯ್ಯ, ಈಗಾಗಲೇ ರಾಜ್ಯದ ಜನರಿಗೆ ಯಾರ ಧಮ್, ತಾಕತ್ತು ಎಷ್ಟು ಎಂದು ಗೊತ್ತಾಗಿದೆ. ಕಳೆದ ಹಾನಗಲ್ ಉಪಚುನಾವಣೆಯಲ್ಲಿ ಎಷ್ಟೇ ದುಡ್ಡು ಖರ್ಚು ಮಾಡಿದರೂ ಬೊಮ್ಮಾಯಿ ಅವರಿಗೆ ತಮ್ಮ ಪಕ್ಕದ ಕ್ಷೇತ್ರ ಗೆಲ್ಲಲು ಆಗಲ್ಲ. ಅಂತವರು ಈಗ ರಾಜ್ಯ ಗೆಲ್ಲೋಕಾಗುತ್ತಾ ಎಂದು ಕಾಲೇಳೆದರು.
ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದು ಅಬ್ಬರಿಸಿದ್ದ ಯಡಿಯೂರಪ್ಪ ಅವರಿಗೆ ಟಾಂಗ್ ನೀಡಿದ ಸಿದ್ದರಾಮಯ್ಯ, 2023ರ ಚುನಾವಣೆಗೆ ಹೋಗೋಣ ಆಗ ಯಾರ ದಮ್ಮು, ತಾಕತ್ ಎಷ್ಟು ಅಂತ ಗೊತ್ತಾಗುತ್ತೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಿಡಲ್ಲ ಎನ್ನಲು ಓಟುಗಳು ಯಡಿಯೂರಪ್ಪ ಅವರ ಜೇಬಿನಲ್ಲಿ ಇವೆಯಾ? ಜನ ಏನು ಅವರ ಜೇಬಲ್ಲಿ ಇದ್ದಾರಾ? ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ. ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದರು.
ಹಗರಣ ತನಿಖೆಗೆ ಆಯೋಗ ರಚನೆ ಮಾಡಿ :
ಅರ್ಕಾವತಿ, ರೀಡೋ, ಸೋಲಾರ್ ಹಗರಣ ಬಯಲು ಮಾಡುತ್ತೇವೆ ಎನ್ನುತ್ತಾರೆ. ಇವರಿಗೆ ಬೇಡ ಎಂದು ಯಾರಾದರೂ ಕೈ ಹಿಡಿದಿದ್ದರಾ? ಮೂರು ವರ್ಷ ಯಾಕೆ ತೆಗೆಯಲಿಲ್ಲ. ಈಗ ನನ್ನ ಬ್ಲಾಕ್ ಮೇಲ್ ಮಾಡ್ತೀರಾ? ಇದಕ್ಕೆಲ್ಲ ಬಗ್ಗುವವರು ನಾವಲ್ಲ. ಆಯ್ತು 2006 ರಿಂದ ಇಲ್ಲಿವರೆಗೂ ನಾವು ಐದು ವರ್ಷ ಬಿಟ್ಟರೆ 11 ವರ್ಷ ಬಿಜೆಪಿಯವರೆ ಅಧಿಕಾರದಲ್ಲಿ ಇದ್ದಿದ್ದು. 2006 ರಿಂದ 2022ರ ಈ ವರೆಗಿನ ಎಲ್ಲ ಹಗರಣಗಳನ್ನು ತನಿಖೆ ಮಾಡಿಸಲಿ. ಇದಕ್ಕಾಗಿ ಒಂದು ಪ್ರತ್ಯೇಕ ಆಯೋಗ ರಚಿಸಲಿ. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಲಿ ಎಂದು ಬಿಜೆಪಿ ಮುಖಂಡರಿಗೆ ಪ್ರತಿ ಸವಾಲ್ ಹಾಕಿದ್ದಾರೆ.
ಖಾಲಿ ಖರ್ಚಿ ಎದುರು ವೀರಾವೇಷ :
ಜನಸ್ಪಂದನ ಕಾರ್ಯಕ್ರಮದಲ್ಲಿ ಜನರೇ ಇರಲಿಲ್ಲ. ಖಾಲಿ ಖುರ್ಚಿಗಳ ಎದುರು ವೀರಾವೇಷದ ಭಾಷಣ ಮಾಡಿದ್ದಾರೆ. ಸ್ಮೃತಿ ಇರಾನಿ ಮಾತನಾಡುವಾಗ ಖಾಲಿ ಖುರ್ಚಿ ಇದ್ದವು. ಯಡಿಯೂರಪ್ಪ, ಬೊಮ್ಮಾಯಿ ಮಾತನಾಡುವಾಗಲೂ ಖುರ್ಚಿ ಖಾಲಿ ಇದ್ದವು. ದುಡ್ಡು ಕೊಟ್ಟು ಜನರನ್ನು ಕರೆದುಕೊಂಡು ಬಂದಿದ್ದರು. ಅವರು ಹೀಗೆ ಬಂದು ಹಾಗೆ ಹೋಗಿದ್ದಾರೆ. ಇವರ ಭಾಷಣ ಕೇಳಲು ಬರಲಿಲ್ಲ. ಜನಸ್ಪಂದನೆಯೇ ಇಲ್ಲ ಎಂದ ಮೇಲೆ ಅದು ಜನಸ್ಪಂದನ ಹೇಗಾಗುತ್ತೆ ಎಂದು ಲೇವಡಿ ಮಾಡಿದರು.
ಪ್ರವಾಹ ಬಂದಾಗ ಸಚಿವರು ಎಲ್ಲಿದ್ದಾರೆ…?
ರಾಜ್ಯದ 18 ಜಿಲ್ಲೆಗಳಲ್ಲಿ ಭಾರಿ ಮಳೆ, ಪ್ರವಾಹದಿಂದ ಸಂಕಷ್ಟದಲ್ಲಿ ಇದ್ದಾರೆ. ಬಾದಾಮಿ ಕ್ಷೇತ್ರದಲ್ಲೆ ಭಾರಿ ಮಳೆ ಬಂದಿದೆ. 2019ರ ಪ್ರವಾಹದ ಪರಿಹಾರವೇ ಇನ್ನೂ ಪೂರ್ಣ ಕೊಟ್ಟಿಲ್ಲ. ಇದೀಗ ಮತ್ತೆ ಅಪಾರ ಬೆಳೆ, ಮನೆಹಾನಿ ಆಗಿದೆ. ರಸ್ತೆಗಳು ಹಾಳಾಗಿವೆ. ಜನರ ಸಂಕಷ್ಟ ಆಲಿಸಲು ಬಂದಿದ್ದಾರಾ? ಉಸ್ತುವಾರಿ ಸಚಿವರು ಎಲ್ಲಿದ್ದಾರೆ? ಆಗಸ್ಟ್, ಜನೆವರಿ, ನವಂಬರ್ ಧ್ವಜಾರೋಹಣಕ್ಕೆ ಸೀಮಿತ ಆಗಿದ್ದಾರೆ. ಇಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರು ಬಿಡಿ, ಗೋವಿಂದ ಕಾರಜೋಳ, ಮುರುಗೇಶ ನಿರಾಣಿ ಸಚಿವರು ಇದ್ದಾರಲ್ಲ. ಪ್ರವಾಹ ಸ್ಥಳಕ್ಕೆ ಬಂದಿದ್ದಾರಾ? ನಿರಾಣಿ ವಿದೇಶದಲ್ಲಿ ಇದ್ದಾನೆ. ಇಲ್ಲಿ ರೈತರ ಜಮೀನು ಸ್ವಾಧೀನ ಮಾಡಿಕೊಳ್ಳುತ್ತಿದ್ದಾನೆ. ಕೈಗಾರಿಕೆ ಪ್ರದೇಶಕ್ಕೆ ರೈತರಿಗೆ ಒತ್ತಾಯ ಪೂರ್ವಕವಾಗಿ ಜಮೀನು ಸ್ವಾಧೀನ ಮಾಡಿಕೊಳ್ಳುತ್ತಿದ್ದಾನೆ. ಈಗಾಗಲೇ ಅಧಿಸೂಚನೆ ಹೊರಡಿಸಿದ್ದಾರಂತೆ. ರೈತರಿಗೆ ಒಪ್ಪಿಗೆ ಇಲ್ಲ. ಈ ಬಗ್ಗೆ ನಾನು ಅಧಿವೇಶನದಲ್ಲಿ ಪ್ರಸ್ತಾಪ ಮಾಡುವೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net