ದಬ್ಬಾಳಿಕೆ ವಿರುದ್ಧ ಮಹಿಳೆಯರು ಧ್ವನಿ ಎತ್ತಬೇಕು: ಪ್ರೊ.ಆರ್. ಇಂದಿರಾ ವಿದ್ಯಾರ್ಥಿನಿಯರಿಗೆ ಸಲಹೆ

3
Published on

ಮೈಸೂರು: ಸರ್ಕಾರದ ಶಕ್ತಿ ಯೋಜನೆಯಿಂದಾಗಿ ಮನೆ ಬಿಟ್ಟು ಹೊರಬಾರದವರೂ ಹೊರ ಪ್ರಪಂಚ ನೋಡಲು ಸಾಧ್ಯವಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕಿ ಪ್ರೊ.ಆರ್.ಇಂದಿರಾ ಹೇಳಿದರು.
ನಗರದ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದಿಗೂ ಅನೇಕ ಗ್ರಾಮೀಣ ಮಹಿಳೆರು ತಮ್ಮ ಮನೆ ಮತ್ತು ಜಮೀನು ಬಿಟ್ಟು ಹೊರಪ್ರಪಂಚ ನೋಡಲು ಸಾಧ್ಯವಾಗಿಲ್ಲ. ಮಹಿಳೆಯರು ಮನೆಯಿಂದ ಹೊರ ಹೋಗುವುದೇ ದೊಡ್ಡ ಅಪರಾಧವೆಂದು ಕೆಲವರು ಬಿಂಬಿಸುತ್ತಾರೆ. ಇಂತಹ ದಬ್ಬಾಳಿಕೆಯ ಮನಸ್ಥಿತಿ ಕೊನೆಗೊಳ್ಳಬೇಕು. ಸರ್ಕಾರ ಜಾರಿಗೊಳಿಸಿರುವ ಶಕ್ತಿ ಯೋಜನೆಯಿಂದ ಮಹಿಳೆಯರು ಮನೆಯಿಂದ ಹೊರಬಂದು ಹೊರ ಪ್ರಪಂಚ ನೋಡಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಯಾವುದೇ ಹಿಂಜರಿಕೆಯಿಲ್ಲದೆ ಮಹಿಳೆಯರು ತಾರತಮ್ಯ ಪ್ರಶ್ನಿಸುವ ಹಾಗೂ ಪ್ರತಿಭಟಿಸುವುದನ್ನು ಮೈಗೂಡಿಸಿಕೊಳ್ಳಬೇಕು. ಪ್ರಶ್ನೆ ಮತ್ತು ಪ್ರತಿಭಟನೆ ನಮ್ಮ ಮೇಲಿನ ದೌರ್ಜನ್ಯ ಖಂಡಿಸಲು ಹಾಗೂ ನಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಇರುವ ಸಾಧನ. ಅಂಬೇಡ್ಕರ್ ಹೇಳಿದಂತೆ ಶಿಕ್ಷಣ, ಸಂಘಟನೆ, ಹೋರಾಟ ಮಹಿಳೆ ಮತ್ತು ಪುರುಷರಿಬ್ಬರಿಗೂ ಅವಶ್ಯಕ ಎಂದು ಹೇಳಿದರು.
ಹಿಂದಿನವರು ಹೋರಾಟ ಮಾಡಿದ್ದಕ್ಕೆ ನಾವು ಇಂದು ತುಸು ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಾಗಿದೆ. ಪ್ರತಿಭಟನೆ ಎಂದರೆ ಗಲಾಟೆ ಅಲ್ಲ. ಅದು ನಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಇರುವ ಮಾರ್ಗ. ಆದರೆ, ಇಂದು ಪ್ರತಿಭಟನೆ, ಪ್ರಶ್ನೆ ಎರಡೂ ಸತ್ತುಹೋಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ದೇಶದಲ್ಲಿ ವಿವಾಹದ ವಯಸ್ಸು ಏರಿಕೆ ಆಗಿದ್ದರೂ ಮದುವೆ ಮಾತ್ರ ಕಡ್ಡಾಯವಾಗಿದೆ. ಇದರಿಂದ ಹೆಣ್ಣು ಮಕ್ಕಳ ಗುರಿ ಕೇವಲ ಮದುವೆ ಆಗುವುದಷ್ಟೇ ಎಂದು ಬಿಂಬಿಸಲಾಗುತ್ತಿದೆ. ಮದುವೆ ಎಂಬುದು ಸಾಮಾಜಿಕ ಸಂಬಂಧ. ಆದರೆ, ನಮ್ಮ ಕನಸು ಮತ್ತು ಗುರಿಗಳನ್ನು ಈಡೇರಿಸಿಕೊಳ್ಳಲು ಅದು ಅಡ್ಡಿಯಾಗಬಾರದು ಎಂದು ಹೇಳಿದರು.
ಹಿಂದೆ ಹೆಣ್ಣು ಮಕ್ಕಳು ಹೆಚ್ಚು ಓದಲು ಪಾಲಕರು ಪ್ರೋತ್ಸಾಹ ನೀಡುತ್ತಿರಲಿಲ್ಲ. ಪರೀಕ್ಷೆ ವೇಳೆ ಹೆಣ್ಣು ಮಕ್ಕಳಿಗೆ ಮದುವೆ ಮಾಡುತ್ತಿದ್ದರು. ಆದರೆ, ಇಂದು ಆ ಸ್ಥಿತಿ ಅಷ್ಟೇನೂ ಇಲ್ಲ. ಮಾನವ ಅಭಿವೃದ್ಧಿ ಸೂಚ್ಯಂಕದ ವರದಿಯಲ್ಲಿ ಉನ್ನತ ಶಿಕ್ಷಣದಲ್ಲಿ ಪುರುಷರಿಗೆ ಹೋಲಿಕೆ ಮಾಡಿದರೆ ಮಹಿಳೆಯರ ಸ್ಥಾನ ಕಡಿಮೆಯೇ ಇದೆ. ಆದ್ದರಿಂದ, ವಿದ್ಯಾರ್ಥಿನಿಯರು ಉನ್ನತ ಶಿಕ್ಷಣವನ್ನು ವ್ಯಾಸಂಗ ಮಾಡಿ ಸಾಧನೆ ಮಾಡಬೇಕು. ಇದರಿಂದ ಆರ್ಥಿಕವಾಗಿ, ಮಾನಸಿಕವಾಗಿ ಸದೃಢರಾಗಬಹುದು ಎಂದು ಸಲಹೆ ನೀಡಿದರು.
ಮಹಿಳಾ ಶಿಕ್ಷಣದಲ್ಲಿ ನೆರೆಯ ಕೇರಳ ರಾಜ್ಯ ಇಡೀ ಏಷ್ಯಾಕ್ಕೆ ಮಾದರಿಯಾಗಿದೆ. ಇದಕ್ಕೆ ಮುಖ್ಯ ಕಾರಣ ಅವರು ಡ್ರಾಪ್‌ಔಟ್ ತಡೆಗಟ್ಟುವಲ್ಲಿ ವಹಿಸುವ ಕಾಳಜಿ. ಆದರೆ, ಕೋವಿಡ್ ಸಮಯದಲ್ಲಿ ನಮ್ಮ ರಾಜ್ಯದಲ್ಲಿ ಸಾಕಷ್ಟು ಮಕ್ಕಳು ಶಾಲೆಯನ್ನು ಅಧರ್ಕ್ಕೆ ಬಿಡುವಂತ ಪರಿಸ್ಥಿತಿ ನಿರ್ಮಾವಾಣವಾಯಿತು. ಆ ಮಕ್ಕಳನ್ನು ಶಾಲೆಗೆ ಮರು ದಾಖಲು ಮಾಡುವ ಕೆಲಸ ಪೂರ್ಣಗೊಂಡಿಲ್ಲ. ಇದರಿಂದ ಶಾಲೆ ಬಿಟ್ಟ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಾಗಿದೆ ಎಂದು ಬೇಸರಿಸಿದರು.
ಕಾಲೇಜಿನ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ, ಪ್ರಾಂಶುಪಾಲೆ ಡಾ.ಎಂ.ಶಾರದಾ, ಉಪ ಪ್ರಾಂಶುಪಾಲ ಡಾ.ಜಿ.ಪ್ರಸಾದಮೂರ್ತಿ ಇತರರು ಇದ್ದರು. ಸಾಂಸ್ಕೃತಿಕ ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net