

ಹಾಸನ: ಈ ಹಿಂದೆ ಹಾಸನದ ದನಗಳ ಜಾತ್ರೆ ಅದ್ಧೂರಿಯಾಗಿ ನಡೆಯುತ್ತಿತ್ತು. ಆದರೆ ಕೆಲವು ವರ್ಷಗಳಿಂದ ಅದಕ್ಕೆ ನೀಡುತ್ತಿರುವ ಮನ್ನಣೆ ಕಡಿಮೆಯಾಯಿತು. ಕೊರೊನಾ ಕಾರಣದಿಂದ ಸ್ಥಗಿತಗೊಂಡಿದ್ದ ಜಾತ್ರೆಗೆ ಮರುಚಾಲನೆ ನೀಡಲಾಗಿದೆ. ಮುಂದಿನ ವರ್ಷದಿಂದ ಡಿಸೆಂಬರ್ 15ರಿಂದ ಹತ್ತು ಅಥವಾ 15 ದಿನಗಳವರೆಗೆ ದನಗಳ ಜಾತ್ರೆಯನ್ನು ಅದ್ಧೂರಿಯಾಗಿ ನಡೆಸಲಾಗುವುದು ಎಂದು ಶಾಸಕ ಎಚ್.ಪಿ.ಸ್ವರೂಪ್ ಹೇಳಿದರು.
ನಗರಸಭೆ ವಸ್ತುಪ್ರದರ್ಶನದ ಆವರಣದಲ್ಲಿ ನಡೆಯುತ್ತಿರುವ ದನಗಳ ಜಾತ್ರೆಗೆ ಮಂಗಳವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಜಾಗವನ್ನು ದನಗಳ ಜಾತ್ರೆಗೆ ಮೀಸಲಿಡಬೇಕು. ಒಡೆದು ಹಾಕಿರುವ ಕಾಂಪೌಂಡ್ ಮುಚ್ಚುವಂತೆ ಸೂಚಿಸಲಾಗಿದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಹಾಸನದ ದನಗಳ ಜಾತ್ರೆ ಎಂದರೆ ರಾಜ್ಯಕ್ಕೆ ಪ್ರಸಿದ್ಧಿ ಪಡೆದಿದ್ದ ಕಾಲವೊಂದಿತ್ತು ಎಂದ ಅವರು, ಕೂಡಲೇ ಸ್ಥಳಕ್ಕೆ ನಗರಸಭೆ ಆಯುಕ್ತ ಸತೀಶ್ ಹಾಗು ಇಂಜಿನಿಯರ್ ಅವರನ್ನು ಕರೆಸಿದ ಶಾಸಕರು ಮೂಲಸೌಕರ್ಯ ಒದಗಿಸುವಂತೆ ಸೂಚಿಸಿದರು.
ರೈತರ ಅಸಮಾಧಾನ
ಹಾಸನ ಮಾತ್ರವಲ್ಲದೆ ಮಂಡ್ಯ, ರಾಮನಗರ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ ಸೇರಿ ವಿವಿಧ ಜಿಲ್ಲೆಗಳಿಂದ ನೂರಾರು ಸಂಖ್ಯೆಯಲ್ಲಿ ರಾಸುಗಳು ಈ ಜಾತ್ರೆಗೆ ಬರುತ್ತಿದ್ದವು. ಆದರೆ ಈ ಬಾರಿ ದನಗಳ ಜಾತ್ರೆ ತನ್ನ ವೈಭವವನ್ನು ಕಳೆದುಕೊಂಡಿದೆ. ಪ್ರಚಾರದ ಕೊರತೆ, ನಗರಸಭೆ ನಿರ್ಲಕ್ಷೃ ಹಾಗು ಜನಪ್ರತಿನಿಧಿಗಳ ನಿರುತ್ಸಾಹದಿಂದ ದನಗಳ ಜಾತ್ರೆ ವರ್ಷದಿಂದ ವರ್ಷಕ್ಕೆ ಕುಗ್ಗುತ್ತಾ ಸಾಗಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಪ್ರದಾಯ ಕೊನೆಯಾಗಬಾರದೆಂದು ನಗರಸಭೆ ಆವರಣದಲ್ಲಿ ದನಗಳ ಜಾತ್ರೆ ಆಯೋಜಿಸಲಾಗಿದೆಯಾದರೂ ಮೂಲಸೌಕರ್ಯಗಳಿಲ್ಲದೆ ಬಂದಿರುವ ಅಲ್ಪ ಸಂಖ್ಯೆಯ ರೈತರು ಯಾಕಾದರೂ ಬಂದಿದ್ದೇವೆಯೋ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದನಗಳ ಜಾತ್ರೆ ಎಂದರೆ ವೈಭವದ ರೀತಿ ಇರಬೇಕು. ಆದರೆ, ನಗರಸಭೆ ಇಲ್ಲಿ ವಿದ್ಯುತ್ ವ್ಯವಸ್ಥೆಯನ್ನು ಜಾನುವಾರುಗಳು ಬಂದ ಬಳಿಕ ಮಾಡಿದೆಯಂತೆ. ವಾರದ ಹಿಂದೆ 150ಕ್ಕೂ ಹೆಚ್ಚಿದ್ದ ರಾಸುಗಳ ಸಂಖ್ಯೆ ಈಗ 60ಕ್ಕೆ ಕುಸಿದಿವೆ. ಬುಧವಾರದ ಹೊತ್ತಿಗೆ ಮತ್ತಷ್ಟು ರಾಸುಗಳು ತಮ್ಮ ಊರಿಗೆ ಪ್ರಯಾಣ ಬೆಳೆಸಲಿವೆ. ಇದಕ್ಕೆ ಮುಖ್ಯ ಕಾರಣ ಸೂಕ್ತ ಸೌಕರ್ಯ ಕಲ್ಪಿಸದಿರುವುದೇ ಆಗಿದೆ ಎಂದು ದೂರಿದರು.
ದನಗಳ ಜಾತ್ರೆ ಆರಂಭದ ಸಮಯದಲ್ಲಿ ಶಾಸಕ ಎಚ್.ಪಿ.ಸ್ವರೂಪ್ ಅವರು ದೆಹಲಿ ಪ್ರವಾಸ ಕೈಗೊಂಡಿದ್ದ ಹಿನ್ನಲೆ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದರು. ಶಾಸಕರು ಆಗಮಿಸುತ್ತಿದ್ದಂತೆ ಅವರನ್ನು ಸುತ್ತುವರಿದ ರೈತರು ಅವ್ಯವಸ್ಥೆಯ ಬಗ್ಗೆ ದೂರುಗಳ ಸುರಿಮಳೆಗೈದರು. ದನಗಳ ಜಾತ್ರೆಗಾಗಿಯೇ ಮೀಸಲಿರುವ ಜಾಗವನ್ನು ಬೇರೆ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಸುತ್ತಲೂ ಹಾಕಿದ್ದ ಕಾಂಪೌಂಡ್ ಒಡೆದು ಕಸ ಸುರಿಯುತ್ತಿದ್ದಾರೆ. ದಿ. ಮಾಜಿ ಶಾಸಕ ಎಚ್.ಎಸ್.ಪ್ರಕಾಶ್ ಹಾಗು ನಗರಸಭೆ ಅಧ್ಯಕ್ಷರಾಗಿದ್ದ ಎಚ್.ಎಸ್.ಅನಿಲ್ ಕುಮಾರ್ ಅವರ ಅಧಿಕಾರಾವಧಿಯಲ್ಲಿನ ವೈಭವದ ದನಗಳ ಜಾತ್ರೆ ಮರುಕಳಿಸಬೇಕೆಂದರೆ ನೀವು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಹಾಸನದ ಸಾಂಸ್ಕೃತಿಕ ಪರಂಪರೆಯನ್ನು ನಾಡಿಗೆ ಪರಿಚಯಿಸುತ್ತಿದ್ದ ದನಗಳ ಜಾತ್ರೆ ಇತಿಹಾಸದ ಪುಟ ಸೇರುತ್ತಾ ಎಂಬ ಪ್ರಶ್ನೆ ಕಾಡುತ್ತಿದೆ. ಪ್ರತಿ ವಷಾರ್ಂತ್ಯದಲ್ಲಿ ನಗರಸಭೆ ವಸ್ತು ಪ್ರದರ್ಶನ ಆವರಣದಲ್ಲಿ ಜಾತ್ರೆಯದ್ದೇ ಕಾರುಬಾರು ಎನ್ನುವಂತಿತ್ತು. ಸಂತೆಪೇಟೆ ವೃತ್ತದಿಂದ ಗೊರೂರು ರಸ್ತೆಯ ಸೇತುವೆವರೆಗೆ ರಾಸುಗಳು ಕಾಣಿಸುತ್ತಿದ್ದವು. ಆದರೆ ಕಾಲ ಸರಿದಂತೆ ಅದ್ದೂರಿ ಜಾತ್ರಾ ವೈಭವ ಕಣ್ಮರೆಯಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಗ್ರಾಮೀಣ ಭಾಗದಲ್ಲಿ ರಾಸುಗಳು ಇಲ್ಲದಿರುವುದು. ಆಧುನಿಕ ತಂತ್ರಜ್ಞಾನ ಬೆಳೆದಂತೆ ಜಾನುವಾರುಗಳ ಅವಲಂಬನೆಯೂ ಕಡಿಮೆಯಾಗಿದೆ. ಒಂದು ಜೊತೆ ಎತ್ತುಗಳನ್ನು ಸಾಕುವುದೆಂದರೆ ಒಂದು ಸಂಸಾರದ ಜವಾಬ್ದಾರಿ ನಿಭಾಯಿಸಿದಂತೆ ಆಗುತ್ತದೆ. ಹೀಗಾಗಿ ಕೃಷಿ ಚಟುವಟಿಕೆಗೆ ಎತ್ತುಗಳ ಅವಲಂಬನೆ ಕಡಿಮೆಯಾಗಿದೆ. ಹೀಗಾಗಿ ದನಗಳ ಜಾತ್ರೆ ಅರ್ಥ ಕಳೆದುಕೊಳ್ಳುತ್ತಿದೆ ಎಂದು ರೈತರೊಬ್ಬರು ಅಭಿಪ್ರಾಯಪಟ್ಟರು.