ದತ್ತು ಯೋಜನೆ ಸಮರ್ಪಕ ಜಾರಿಯಾಗಲಿ

14
Published on

ಮೈಸೂರು: ಅನಾಥ ಮಕ್ಕಳ ದತ್ತು ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿ ಅನಾಥ ಮಕ್ಕಳಿಗೆ ಶಾಶ್ವತ ನೆಲೆ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವಿವಿಧ ಸಮಿತಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.


ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸೂಕ್ಷ್ಮವಾದದ್ದು. ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಗುರುತರ ಜವಾಬ್ದಾರಿ ಹೊಂದಿದೆ. ಎಚ್‌ಐವಿ ಪೀಡಿತ ಪಾಲಕರಿಂದ ಮಕ್ಕಳಿಗೆ ಸೋಂಕು ಬರುವ ಸಾಧ್ಯತೆ ಇದ್ದು, ಅಂತಹ ಮಕ್ಕಳನ್ನು ಗುರುತಿಸಿ ಚಿಕಿತ್ಸೆ ನೀಡುವ ಜತೆಗೆ, ಪ್ರತಿ ತಿಂಗಳು 1 ಸಾವಿರ ರೂ. ಪ್ರೋತ್ಸಾಹ ಧನ ನೀಡಬೇಕು. ಯಾರಾದರೂ ಮರಣ ಹೊಂದಿದ್ದರೆ ಅವರನ್ನು ಪಟ್ಟಿಯಿಂದ ಕೈಬಿಡಬೇಕು ಎಂದು ಸಲಹೆ ನೀಡಿದರು.


ಬಾಲ್ಯವಿವಾಹ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಬಾಲ್ಯವಿವಾಹ ನಡೆಯುತ್ತವೆ. ಯಾವುದೇ ಮಗು ಶಾಲೆ-ಕಾಲೇಜು ಬಿಟ್ಟರೆ ಅಂಥವರ ಬಗ್ಗೆ ಅಧ್ಯಯನ ಮಾಡಿದರೆ ಇನ್ನೂ ಪರಿಣಾಮಕಾರಿಯಾಗಿ ಬಾಲ್ಯ ವಿವಾಹ ತಡೆಯಬಹುದು. ಅಂಗನವಾಡಿ, ಆಶಾ ಕಾರ್ಯಕರ್ತೆಯರ ಗಮನಕ್ಕೆ ಬರದೇ ಯಾವುದೇ ಬಾಲ್ಯ ವಿವಾಹ ನಡೆಯುವುದಿಲ್ಲ. ಇವರಿಂದ ಮಾಹಿತಿ ಪಡೆದುಕೊಳ್ಳಬೇಕು. ಅಪರಾಧಿಗಳಿಗೆ ಶಿಕ್ಷೆ ಆಗುವಂತೆ ಅಗತ್ಯ ಕ್ರಮ ವಹಿಸಬೇಕು ಎಂದರು.


ಜಿಲ್ಲೆಯಲ್ಲಿ 699 ಮಕ್ಕಳು ಶಾಲೆಯಿಂದ ಹೊರಗಿದ್ದು, ಶಾಲೆ ಬಿಟ್ಟ ಮಕ್ಕಳ ಪಾಲಕರನ್ನು ಮನವೊಲಿಸಿ ಅಂತಹ ಮಕ್ಕಳನ್ನು ಪುನಃ ಶಾಲೆಗೆ ಕರೆದುಕೊಂಡು ಬನ್ನಿ. ಮಕ್ಕಳಿಗೆ ಶಿಕ್ಷಣದ ಜತೆಗೆ ಬಾಲ್ಯದ ಜೀವನ ಅನುಭವಿಸಲು ಅವಕಾಶ ಕಲ್ಪಿಸಬೇಕು. ಮಕ್ಕಳ ಹಕ್ಕು ರಕ್ಷಣೆ ಮಾಡಬೇಕು. 2023ರಲ್ಲಿ ಮೈಸೂರನ್ನು ಬಾಲ ಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಘೋಷಣೆ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ಮುಂದಿನ 3 ತಿಂಗಳಲ್ಲಿ ಕನಿಷ್ಠ 150 ಬಾಲ ಕಾರ್ಮಿಕರನ್ನು ಗುರುತಿಸಿ ಬಾಲ ಕಾರ್ಮಿಕ ಪದ್ಧತಿಯಿಂದ ಮುಕ್ತಗೊಳಿಸುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ಸೂಚಿಸಿದರು.


ಜಿಲ್ಲೆಯು ಪ್ರವಾಸಿ ತಾಣದಲ್ಲಿ ಭಿಕ್ಷಾಟನೆ ಹೆಚ್ಚಿದ್ದು ಮಕ್ಕಳನ್ನು ಗುರುತಿಸಿ ಆಪ್ತ ಸಮಾಲೋಚನೆ ನಡೆಸಿ, ಭಿಕ್ಷಾಟನೆ ಬಿಡಿಸಬೇಕು ಎಂದು ತಿಳಿಸಿದರು.


ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವರಾಜ ಭೂತೆ, ಜಿಲ್ಲಾ ಪಂಚಾಯಿತಿ ಸಿಇಒ ಗಾಯತ್ರಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಬಸವರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪ್ರಸಾದ್, ಜಿಲ್ಲೆಯ ಸಿಡಿಪಿಒಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net