ದತ್ತಾತ್ರೇಯ ದರ್ಶನ ಪಡೆದ ಮಹಾ ಡಿಸಿಎಂ ಫಡ್ನವೀಸ್

1408Klb06
Published on

ಕಲಬುರಗಿ: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಬುಧವಾರ ಅಫಜಲಪುರ ತಾಲೂಕಿನ ದೇವಲಗಾಣಗಾಪುರಕ್ಕೆ ಭೇಟಿ ನೀಡಿ, ದತ್ತಾತ್ರೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ವಿಶೇಷ ವಿಮಾನದ ಮೂಲಕ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಅವರು, ನೇರವಾಗಿ ದೇಲಗಾಣಗಾಪುರಕ್ಕೆ ಪ್ರಯಾಣಿಸಿದರು. ದತ್ತಾತ್ರೇಯ ದೇವಸ್ಥಾನದಲ್ಲಿ ರುದ್ರಾಭಿಷೇಕ, ಸುವರ್ಣ ಪಾದುಕಾ ಪೂಜೆ, ಅನ್ನದಾನ, ಪಲ್ಲಕ್ಕಿ ಸೇವೆ ಸಂಕಲ್ಪ ನೆರವೇರಿಸಿದರು. ದತ್ತ ಮಹಾರಾಜರ ಪಾದುಕಾ ದರ್ಶನ ಮಾಡಿ, ಕೇಸರ ಪ್ರಸಾದ ಸ್ವೀಕರಿಸಿದರು.
ದೇವಸ್ಥಾನದ ಅರ್ಚಕರು, ಆಡಳಿತ ಮಂಡಳಿಯಿಂದ ಫಡ್ನವೀಸ್ ಅವರಿಗೆ ದತ್ತಾತ್ರೇಯ ನಿರ್ಗುಣ ಪಾದುಕಾ ಭಾವಚಿತ್ರ, ಗುರುಚರಿತ್ರಾ, ಬೆಳ್ಳಿ ರುದ್ರಾಕ್ಷಿ ನೀಡಿ, ಸನ್ಮಾನಿಸಲಾಯಿತು.
ಅಕ್ಕಲಕೋಟ ಶಾಸಕ ಸಚಿನ ಕಲ್ಯಾಣಶೆಟ್ಟಿ, ಶಾಸಕ ಬಸವರಾಜ ಮತ್ತಿಮಡು, ಜಿಪಂ ಮಾಜಿ ಅಧ್ಯಕ್ಷ ನಿತೀನ್ ಗುತ್ತೇದಾರ್, ತಹಸೀಲ್ದಾರ್ ಸಂಜೀವ ದಾಸರ್, ಕಾರ್ಯನಿರ್ವಾಹಕ ಅಧಿಕಾರಿ ಶಿವಕಾಂತಮ್ಮ, ಸಿಬ್ಬಂದಿ ದತ್ತು ನಿಂಬರ್ಗಿ, ಅರ್ಚಕರಾದ ಪ್ರಿಯಾಂಕ್ ಪೂಜಾರಿ, ಪ್ರಖ್ಯಾತ ಪೂಜಾರಿ, ಕಿರಣ ಪೂಜಾರಿ, ಪ್ರಫುಲ್ ಪೂಜಾರಿ, ಪ್ರಸನ್ನ ಪೂಜಾರಿ, ಋಷಬ್ ಪೂಜಾರಿ, ಗಂಗಾಧರ ಪೂಜಾರಿ, ದೇವು ಪೂಜಾರಿ, ದಾಮೋಧರ ಪೂಜಾರಿ, ಪುರುಷೋತ್ತಮ ಪೂಜಾರಿ, ಆದಿತ್ಯ ಪೂಜಾರಿ, ರತ್ನಾಕರ್ ಪೂಜಾರಿ, ಪ್ರಸಾದ ಪೂಜಾರಿ, ಶರತ್ ಪೂಜಾರಿ, ಮುನ್ನಾ ಪೂಜಾರಿ ಇತರರಿದ್ದರು.

ಉಚಿತ ಅಪಾಯಕಾರಿ: ಶಾಸಕ ಬಸವರಾಜ ಮತ್ತಿಮಡು ಮನೆಯಲ್ಲಿ ಉಪಹಾರ ಸೇವಿಸಿದ ದೇವೇಂದ್ರ ಫಡ್ನವೀಸ್ ಪಕ್ಷದ ಜಿಲ್ಲಾ ಮುಖಂಡರೊಂದಿಗೆ ರಾಜ್ಯದ ಸಂಘಟನೆ ಸೇರಿ ವಿವಿಧ ವಿಷಯ ಚರ್ಚಿಸಿದರು. ಗ್ಯಾರಂಟಿಗಳು ಸ್ಥಗಿತವಾಗಿದ್ದು, ಸರ್ಕಾರ ಭರವಸೆ ಕಳೆದುಕೊಂಡಿದೆ ಎಂದು ಸ್ಥಳೀಯ ಮುಖಂಡರು ಗಮನಕ್ಕೆ ತಂದರು. ಉಚಿತ ಯೋಜನೆಗಳು ಅಭಿವೃದ್ಧಿಗೆ ಮಾರಕವಾಗಿವೆ, ಅದು ಲೋಕಸಭೆ ಚುನಾವಣೆಯಲ್ಲಿ ಸಾಬೀತಾಗಿದೆ ಎಂದು ಫಡ್ನವೀಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಶಾಸಕ ಸಚಿನ ಕಲ್ಯಾಣಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರz್ದÉÃವಾಡಗಿ, ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್, ಶಿವಪ್ರಭು ಪಾಟೀಲ್ ಇತರರಿದ್ದರು.

ವಿಶೇಷ ಅನುದಾನಕ್ಕೆ ಮನವಿ: ಕೇಂದ್ರ ಸರ್ಕಾರದ ಮಹತ್ವದ ಪ್ರಸಾದ ಯೋಜನೆ ಅಡಿ ದೇವಲಗಾಣಗಾಪುರ ಸುಕ್ಷೇತ್ರದ ಅಭಿವೃದ್ಧಿಗೆ ಆಯ್ಕೆ ಮಾಡಲು ಮನವಿ ಪತ್ರ ಬರೆಯಲಾಗಿದ್ದು, ಕ್ಷೇತ್ರಕ್ಕೆ ಯೋಜನೆ ಘೋಷಿಸುವಂತೆ, ಕ್ಷೇತ್ರದ ಅಭಿವೃದ್ಧಿ ವಿಶೇಷ ಅನುದಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರುವಂತೆ ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್ ಸೇರಿ ಬಿಜೆಪಿ ಮುಖಂಡರು ದೇವಿಂದ್ರ ಫಡ್ನವೀಸ್ ಅವರ ಗಮನಕ್ಕೆ ತಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net